ನವದೆಹಲಿ: ಎತ್ತಿನಹೊಳೆ ಯೋಜನೆಯ ಮೊದಲ ಹಂತ ಉದ್ಘಾಟನೆ ಬೆನ್ನಲ್ಲೇ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಯೋಜನೆ ಅನುಷ್ಠಾನದ ವೇಳೆ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ಮಾಹಿತಿ ನೀಡಿದೆ. ಸೂಕ್ಷ್ಮ ಜೀವರಾಶಿಗಳಿಗೆ ತೊಂದರೆಯಾಗಿದೆ. ಗುಡ್ಡ ಕುಸಿತ ಸಂಭವಿಸುತ್ತಿದೆ. ಆದರೆ ನೀರು ನೀಡುವ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರಿದಂತೆ ಕಾಣುತ್ತಿಲ್ಲ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ತಾಪಮಾನ ಬದಲಾವಣೆ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಎನ್.ಮಂಜುನಾಥ್‌ಗೆ ಪತ್ರ ಬರೆದಿರುವ ಸಚಿವಾಲಯದ ಡಿಐಜಿ ಪ್ರಣೀತಾ ಪಾಲ್, ಯೋಜನೆಗೆ 1200 ಹೆಕ್ಟೇರ್ ಭೂಮಿ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಅರಣ್ಯ ಭೂಮಿ ಎನ್ನಲಾಗಿದೆ. ಅರಣ್ಯ ನಾಶಕ್ಕೆ
ಪರ್ಯಾಯ ಅರಣ್ಯದ ಭರವಸೆ ನೀಡಿತ್ತು. ಈಗ ನೀಡಿರುವ ಮಾಹಿತಿಯ ಪ್ರದೇಶದಲ್ಲಿ ರಸ್ತೆ ಹಾದು ಹೋಗಿದೆ. ಹೀಗಾಗಿ ಈ ಬಗ್ಗೆ ವಾಸ್ತವಾಂಶ ವರದಿ ಸಲ್ಲಿಸಬೇಕು. ಇಡೀ ಯೋಜನೆಯ ಕಾರ್ಯಸಾಧ್ಯತೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.















