Coastal Bulletin

ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖಂಡ ಶರದ್ ಯಾದವ್‌ (75) ಅವರು ಗುರುವಾರ ನಿಧನರಾದರು.

ಶರದ್‌ ಯಾದವ್‌ ಅವರ ಮಗಳು ತಂದೆಯ ಸಾವಿನ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸಿದ್ದಾರೆ. 'ನನ್ನ ತಂದೆ ಇನ್ನಿಲ್ಲ...' ಎಂದು ಪ್ರಕಟಿಸಿದ್ದಾರೆ.

ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕೇಂದ್ರ ಮಾಜಿ ಸಚಿವ, ಆರ್‌ಜೆಡಿ ನಾಯಕ ಶರದ್‌ ಯಾದವ್‌ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಪುತ್ರಿ ಸುಭಾಷಿಣಿ ಯಾದವ್‌ ತಿಳಿಸಿದ್ದಾರೆ.

ಪ್ರಜ್ಞೆ ತಪ್ಪಿದ್ದ ಅವರನ್ನು ಶರದ್‌ ಅವರನ್ನು ಗುರುವಾರ ರಾತ್ರಿ ಗುರುಗ್ರಾಮದಲ್ಲಿರುವ ಫೋರ್ಟಿಸ್‌ ಮೆಮೊರಿಯಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ದಾಖಲಿಸಲಾಗಿತ್ತು. 'ರಕ್ತದೊತ್ತಡ ಹಾಗೂ ನಾಡಿ ಬಡಿತ ಅದಾಗಲೇ ನಿಂತಿತ್ತು, ಹಲವು ತುರ್ತು ಚಿಕಿತ್ಸೆಗಳನ್ನು ನಡೆಸಿದ ವೈದ್ಯರು ರಾತ್ರಿ 10:19ಕ್ಕೆ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು' ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಎರಡು ವರ್ಷಗಳ ಹಿಂದೆ ಆರ್‌ಜೆಡಿ ಜತೆ ತಮ್ಮ ರಾಜಕೀಯ ಪಕ್ಷವನ್ನು ವಿಲೀನಗೊಳಿಸಿದ್ದ ಯಾದವ್‌, ಆನಂತರ ಸಕ್ರಿಯ ರಾಜಕೀಯದಿಂದ ದೂರವೇ ಉಳಿದಿದ್ದರು. ಆರ್‌ಜೆಡಿಯ ಸಭೆ ಸಮಾರಂಭಗಳಲ್ಲಿಯೂ ಅವರು ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಸೇರಿದಂತೆ ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರಿಂದ ಮನೆ ಮತ್ತು ಆಸ್ಪತ್ರೆಗೆ ಸೀಮಿತಗೊಂಡಿದ್ದರು.

ಗುರುವಾರ ಸಂಜೆ ಮನೆಯಲ್ಲಿ ಅವರು ಹಠಾತ್‌ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ‘‘ಆಸ್ಪತ್ರೆಗೆ ಸೇರಿಸುವ ವೇಳೆಗಾಗಲೇ ಅವರ ನಾಡಿ ಬಡಿತ ನಿಂತು ಹೋಗಿತ್ತು. ಹೃದಯಾಘಾತದಿಂದ ಮನೆಯಲ್ಲಿಯೇ ಅವರು ಮೃತಪಟ್ಟಿದ್ದಾರೆ,’’ ಎಂದು ವೈದ್ಯರು ಖಚಿತ ಪಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

'ಶರದ್‌ ಯಾದವ್‌ ಅವರ ನಿಧನವು ನೋವನ್ನುಂಟು ಮಾಡಿದೆ. ಸಾರ್ವಜನಿಕ ಜೀವನದ ಸುದೀರ್ಘ ಅವಧಿಯಲ್ಲಿ ಅವರು ಯಶಸ್ವಿ ಸಂಸದ ಮತ್ತು ಸಚಿವರಾಗಿ ಗುರುತಿಸಿಕೊಂಡವರು. ಡಾ.ಲೋಹಿಯಾ ಅವರ ಚಿಂತನೆಗಳಿಂದ ತೀವ್ರವಾಗಿ ಪ್ರಭಾವಿತರಾಗಿದ್ದವರು. ನಮ್ಮ ಭೇಟಿ, ಮಾತುಕತೆ ನೆನಪಿನಲ್ಲಿ ಉಳಿಯುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು,... ' ಎಂದಿದ್ದಾರೆ.

ಬಹುಕಾಲದ ಗೆಳೆಯ ಮತ್ತು ಜನತಾ ಪರಿವಾರದ ಸಹವರ್ತಿಯಾಗಿದ್ದ ಶರದ್ ಯಾದವ್‌ ಅವರ ಸಾವಿನ ಸುದ್ದಿ ತಿಳಿದು ತುಂಬ ದುಃಖವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಹಂಚಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದಿಯಷ್ಟೇ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.

2003ರಲ್ಲಿ ಜೆಡಿಯು ಸ್ಥಾಪನೆಯಾದಾಗ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಲೋಕಸಭೆಗೆ ಏಳು ಬಾರಿ ಹಾಗೂ ರಾಜ್ಯಸಭೆಗೆ ಮೂರು ಬಾರಿ ಜೆಡಿಯು ಮೂಲಕ ಆಯ್ಕೆಯಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಪಕ್ಷದ ನಾಯಕತ್ವದ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅನಂತರ ಅವರು 2018ರಲ್ಲಿ ನೂತನ ಪಕ್ಷ ಲೋಕತಾಂತ್ರಿಕ್ ಜನತಾ ದಳ (ಎಲ್‌ಜೆಡಿ) ಸ್ಥಾಪಿಸಿದ್ದರು.

2020ರ ಮಾರ್ಚ್‌ನಲ್ಲಿ ಎಲ್‌ಜೆಡಿ ಪಕ್ಷವನ್ನು ಲಾಲೂ ಯಾದವ್‌ ಅವರ ಆರ್‌ಜೆಡಿ ಪಕ್ಷದೊಂದಿಗೆ ವಿಲೀನಗೊಳಿಸಿದರು. ಅದನ್ನು ಅವರು ವಿರೋಧ ಪಕ್ಷಗಳ ಒಕ್ಕೂಟದ ಮೊದಲ ಹೆಜ್ಜೆ ಎಂದು ಬಣ್ಣಿಸಿದ್ದರು.

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಟ್ವೀಟ್ ಮಾಡಿದ್ದು, ಶ್ರೇಷ್ಠ ಸಮಾಜವಾದಿ ನಾಯಕ ಮತ್ತು ನನ್ನ ಮಾರ್ಗದರ್ಶಕರಾದ ಶರದ್‌ ಯಾದವ್‌ ಅವರ ನಿಧನದ ಸುದ್ದಿ ತಿಳಿದು ತೀವ್ರ ಬೇಸವಾಗಿದೆ. ನನಗೆ ಮಾತುಗಳೇ ಹೊರಡದಂತಾಗಿದೆ,' ಎಂದು ಸಂತಾಪ ಸೂಚಿಸಿದ್ದಾರೆ.

Leave a Comment