ಬ್ಲಿಂಕಿಟ್​ನಲ್ಲಿ ಆರ್ಡರ್​​ ಮಾಡಿದ್ದ ಮೊಟ್ಟೆಯಲ್ಲಿ ಹುಳು: ದೂರು ನೀಡಿದ ಬೆನ್ನಲ್ಲೇ ದಾಳಿ ಮಾಡಿದ ಆರೋಗ್ಯ ಇಲಾಖೆ

Coastal Bulletin
ಬ್ಲಿಂಕಿಟ್​ನಲ್ಲಿ ಆರ್ಡರ್​​ ಮಾಡಿದ್ದ ಮೊಟ್ಟೆಯಲ್ಲಿ ಹುಳು: ದೂರು ನೀಡಿದ ಬೆನ್ನಲ್ಲೇ ದಾಳಿ ಮಾಡಿದ ಆರೋಗ್ಯ ಇಲಾಖೆ

ಬೆಂಗಳೂರು: ಕ್ಷಿಪ್ರ ಡೆಲಿವರಿ ಆ್ಯಪ್‌ಗಳ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳುವ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ಮತ್ತೊಮ್ಮೆ ಗಂಭೀರ ಅನುಮಾನ ವ್ಯಕ್ತವಾಗಿದೆ. ಕರಾವಳಿ ನಗರಿ ಮಂಗಳೂರಿನಲ್ಲಿ ಆನ್‌ಲೈನ್ ಡೆಲಿವರಿ ‘ಬ್ಲಿಂಕಿಟ್‘ ಮೂಲಕ ಆರ್ಡರ್ ಮಾಡಿದ್ದ ಮೊಟ್ಟೆಯೊಂದರಲ್ಲಿ ಹುಳುಗಳು ಪತ್ತೆಯಾಗಿದ್ದು, ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಕುರಿತು ನೇರವಾಗಿ ಸಚಿವ ಯು.ಟಿ. ಖಾದರ್​​ಗೆ ಗ್ರಾಹಕರಿಂದ ದೂರು ಸಲ್ಲಿಸಲಾಗಿದೆ. ಈ ಬೆನ್ನಲ್ಲೇ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನಡೆದಿದ್ದೇನು?

ಮಂಗಳೂರಿನ ಫಳ್ನೀರ್‌ನಲ್ಲಿರುವ ‘ಫಳ್ನೀರ್ ಸ್ಕ್ವೇರ್’ ಬ್ಲಿಂಕಿಟ್ ಹಬ್‌ನಿಂದ ಗ್ರಾಹಕರೊಬ್ಬರು ಆನ್‌ಲೈನ್ ಮೂಲಕ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಂದ ಡೆಲಿವರಿ ಪ್ಯಾಕೆಟ್‌ನಿಂದ ಮೊಟ್ಟೆಯನ್ನು ಒಡೆದು ನೋಡಿದಾಗ ಅದರೊಳಗೆ ಹುಳುಗಳು ಜೀವಂತವಾಗಿ ಹರಿದಾಡುತ್ತಿರುವುದು ಕಂಡುಬಂದಿದೆ.

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಜನರಿಗೆ ಹಳೆಯ ಹಾಗೂ ಬಳಸಲು ಯೋಗ್ಯವಲ್ಲದ ಕೊಳೆತ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕರು, ತಕ್ಷಣವೇ ಈ ವಿಚಾರವನ್ನು ಸಚಿವ ಯು.ಟಿ. ಖಾದರ್ ಗಮನಕ್ಕೆ ತಂದು ದೂರು ನೀಡಿದ್ದಾರೆ.

ಗ್ರಾಹಕರಿಂದ ಸಚಿವರಿಗೆ ದೂರು ಬೆನ್ನಲ್ಲೇ ಆಹಾರ ಇಲಾಖೆ ದಾಳಿ

ಗ್ರಾಹಕರಿಂದ ಸಚಿವರಿಗೆ ದೂರು ಬೆನ್ನಲ್ಲೇ ಎಚ್ಚೆತ್ತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ

ಅಧಿಕಾರಿಗಳ ತಂಡ, ಫಳ್ನೀರ್ ಸ್ಕ್ವೇರ್‌ನಲ್ಲಿರುವ ಬ್ಲಿಂಕಿಟ್ ಸಂಸ್ಥೆಯ ಮಳಿಗೆ ಹಾಗೂ ಗೋಡೌನ್ ಮೇಲೆ ದಿಢೀರ್ ದಾಳಿ ಮಾಡಿದೆ. ತಪಾಸಣೆ ವೇಳೆ ಅಲ್ಲಿ ದಾಸ್ತಾನು ಇರಿಸಲಾಗಿದ್ದ ಹಲವು ಮೊಟ್ಟೆಗಳ ಪ್ಯಾಕೆಟ್‌ಗಳು ಈಗಾಗಲೇ ಒಡೆದು ಹೋಗಿ, ತೀವ್ರ ದುರ್ವಾಸನೆ ಬೀರುತ್ತಾ ಕೊಳೆತು ನಾರುತ್ತಿರುವುದು ಪತ್ತೆಯಾಗಿದೆ.

ಒಡೆದ, ಹಾಳಾದ ಮೊಟ್ಟೆ ಪ್ಯಾಕೆಟ್ಗಳನ್ನು ತೆರವು ಮಾಡಲು ಸೂಚನೆ

ಇನ್ನು ಗ್ರಾಹಕರ ಆರೋಗ್ಯಕ್ಕೆ ಮಾರಕವಾಗಬಲ್ಲ ಇಂತಹ ಕೊಳೆತ ಹಾಗೂ ಒಡೆದ ಮೊಟ್ಟೆಗಳ ಪ್ಯಾಕೆಟ್‌ಗಳನ್ನು ತಕ್ಷಣವೇ ಸ್ಥಳದಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಬ್ಲಿಂಕಿಟ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಸದ್ಯ ಮಳಿಗೆಯ ಸಂಗ್ರಹಣ ಕೋಣೆಯನ್ನು ತಾತ್ಕಾಲಿಕವಾಗಿ ಸೀಲ್ ಮಾಡಲು ನಿರ್ಧರಿಸಲಾಗಿದ್ದು, ಸಂಸ್ಥೆಯವರಿಗೆ ನೋಟಿಸ್ ನೀಡಿ ಸೂಕ್ತ ಸಮಜಾಯಿಸಿ ನೀಡಲು ಸೂಚಿಸಲಾಗಿದೆ.

Leave a Comment