ಇಂದಿನಿಂದ ಮೈಸೂರಿನಲ್ಲಿ ಯುವದಸರಾ ರಂಗು – ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ

Coastal Bulletin
ಇಂದಿನಿಂದ ಮೈಸೂರಿನಲ್ಲಿ ಯುವದಸರಾ ರಂಗು – ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ

ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವದ ಕಳೆಗಟ್ಟುತ್ತಿದ್ದು, ಸಾಂಸ್ಕೃತಿಕ ನಗರಿಯು ದಸರಾ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಇಂದಿನಿಂದ ಯುವದಸರಾ (Yuva Dasara) ಆರಂಭಗೊಳ್ಳುತ್ತಿದ್ದು, ಯುವಜನತೆಯನ್ನ ಹುಚ್ಚೆದ್ದು ಕುಣಿಸಲು ವೇದಿಕೆ ಸಜ್ಜಾಗಿದೆ. ಈ ಬಾರಿಯ ಯುವ ದಸರಾಗೆ ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ ನೀಡಲಿದ್ದು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವೂ ಕೂಡ ನೋಡುಗರನ್ನು ಕಣ್ಮನ ಸೆಳೆಯುತ್ತಿದೆ.

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಆದ ಯುವದಸರಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇಂದಿನಿಂದ ಐದು ದಿನಗಳ ಕಾಲ ಮೈಸೂರು ನಗರದ ಹೊರವಲಯದ ಉತ್ತನಹಳ್ಳಿ ಬಳಿ ಯುವದಸರಾ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಯುವದಸರಾಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಮೊದಲ ದಿನವೇ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರಿಂದ ಸಂಗೀತ ರಸಸಂಜೆ ಮೂಡಿಬರಲಿದೆ.

ಯುವ ದಸರಾದ 2ನೇ ದಿನ ಖ್ಯಾತ ತ್ರಿವಳಿ ಸಂಗೀತ ನಿರ್ದೇಶಕತ್ರಯರಾದ ಶಂಕರ್ ಮಹದೇವನ್, ಎಹ್ಸಾನ್ ಹಾಗೂ ಲಾಯ್‌ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೂರನೇ ದಿನ ಯುವಕರ ನೆಚ್ಚಿನ ಗಾಯಕ ಸಿದ್ ಶ್ರೀರಾಮ್, ನಾಲ್ಕನೇ ದಿನ ಸ್ಯಾಂಡಲ್ ವುಡ್ ನೈಟ್ಸ್ ಜೊತೆ ಗಾಯಕ ವಿಜಯ ಪ್ರಕಾಶ್, ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಸಾಥ್ ನೀಡಲಿದ್ದಾರೆ. ಕೊನೆಯ ದಿನ ಖ್ಯಾತ ಗಾಯಕಿ ಜಾಸ್ಮಿನ್ ಸೇರಿದಂತೆ ವಿವಿಧ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಪ್ರತಿದಿನ 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ.

ನೋಡುಗರ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ:

14px;">ಇನ್ನು ಮೈಸೂರು ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಪ್ರಜಾಪ್ರಭುತ್ವದ ಹಬ್ಬದ ಪರಿಕಲ್ಪನೆಯಲ್ಲಿ ಹೂಗಳಿಂದಲೇ ವಿಧಾನಸೌಧ ನಿರ್ಮಾಣ ಮಾಡಲಾಗಿದೆ.

ಶ್ರೀರಂಗಪಟ್ಟಣ ದಸರಾದ ಯುವ ಸಂಭ್ರಮಕ್ಕೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಡಾ.ಶೋಭರಾಣಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಸರಾ ವೈಭವ:

ನಾಡಹಬ್ಬದ ವೈಭವ ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಳೆಗಟ್ಟಿದೆ. ನಾದಬ್ರಹ್ಮ ಹಂಸಲೇಖ ಅವರು ದಸರಾ ಸಂಭ್ರಮಕ್ಕೆ ಚಾಲನೆ ನೀಡಿದ್ದು, ಪಟ್ಟದ ಗೊಂಬೆಗಳ ಪೂಜೆ, ಮೈಸೂರು ಅರಮನೆಯ ವೈಭವ ಸಾರುವ ಗೊಂಬೆಗಳು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಯಾಣಿಕರ ಗಮನ ಸೆಳೆದಿವೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ದಸರಾವನ್ನು ಆಯೋಜಿಸಲಾಗಿದೆ. ಮುಂದಿನ ಆರು ದಿನಗಳ ಕಾಲ ಪ್ರತಿದಿನ ಸಂಜೆ ವಿಮಾನ ನಿಲ್ದಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Leave a Comment