ಮಂಗಳೂರು: ಬ್ರಿಟಿಷರ ಕಾಲದ 'ಸೌತ್ ಕೆನರಾ' ಎಂಬ ಐತಿಹಾಸಿಕ ಹೆಸರಿನ ಕುರುಹಾಗಿ ಉಳಿದುಕೊಂಡು ಬಂದಿರುವ 'ದಕ್ಷಿಣ ಕನ್ನಡ' ಜಿಲ್ಲೆಯನ್ನು ಇನ್ಮುಂದೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಮಂಗಳೂರಿನ ಪಡೀಲ್ನ ಪ್ರಜಾಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆ ಹಾಗೂ ಸಂವಾದಕ್ಕಾಗಿ ಒಂದು ತಿಂಗಳ ಕಾಲಾವಕಾಶ ನೀಡಿ ಕರಡು ಅಧಿಸೂಚನೆ (Draft Notification) ಹೊರಡಿಸಲು ನಿರ್ಧರಿಸಲಾಗಿದೆ.
ಸರ್ಕಾರದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಕರಾವಳಿಯಾದ್ಯಂತ ಪರ ಮತ್ತು ವಿರೋಧದ ತೀವ್ರ ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬರಹಗಳ ಮೂಲಕ ಜನಾಭಿಪ್ರಾಯಗಳೂ ಒಂದು ಕಡೆ ಮಂಗಳೂರನ್ನು ಜಾಗತಿಕ 'ಬ್ರ್ಯಾಂಡ್' ಆಗಿ ಬೆಳೆಸಲು ಈ ಹೆಸರು ಅನಿವಾರ್ಯ ಎಂಬ ವಾದ ಕೇಳಿಬಂದರೆ, ಇನ್ನೊಂದೆಡೆ ದಕ್ಷಿಣ ಕನ್ನಡದ ಐತಿಹಾಸಿಕ ಅಸ್ಮಿತೆ ಹಾಗೂ ಗ್ರಾಮೀಣ ತಾಲೂಕುಗಳ ಪ್ರತ್ಯೇಕ ಗುರುತನ್ನು ಮಂಗಳೂರು ನಗರದ ಹೆಸರಿನಡಿ ಮರೆಮಾಡಬಾರದು ಎಂಬ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ.
1997ರ ಇಬ್ಭಾಗ ಮತ್ತು ಐತಿಹಾಸಿಕ ಹಿನ್ನೆಲೆ: 1997ರಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಜಿಸಿ ಉಡುಪಿ ಜಿಲ್ಲೆಯನ್ನು ಪ್ರತ್ಯೇಕಿಸಲಾಯಿತು. ಆಗ ಉತ್ತರ ಭಾಗದ ತಾಲೂಕುಗಳು ತಮ್ಮ ಜಿಲ್ಲಾ ಕೇಂದ್ರದ ಹೆಸರಿನಲ್ಲೇ ‘ಉಡುಪಿ ಜಿಲ್ಲೆ’ ಎಂದು ಗುರುತಿಸಿಕೊಂಡರೆ, ದಕ್ಷಿಣ ಭಾಗದ ಮಂಗಳೂರು ಕೇಂದ್ರಿತ ಜಿಲ್ಲೆ ‘ದಕ್ಷಿಣ ಕನ್ನಡ’ ಎಂಬ ಹೆಸರನ್ನೇ ಮುಂದುವರಿಸಿಕೊಂಡು ಬಂದಿತ್ತು. ಇದೀಗ ಸುಮಾರು ಮೂರು ದಶಕಗಳ ಬಳಿಕ ಜಿಲ್ಲಾ ಕೇಂದ್ರದ ಹೆಸರನ್ನೇ ಇಡೀ ಜಿಲ್ಲೆಗೆ ಇಡುವ ಪ್ರಸ್ತಾವನೆಗೆ ಸರ್ಕಾರ ಜೀವ ನೀಡಿದೆ.
'ಬ್ರ್ಯಾಂಡ್ ಮಂಗಳೂರು' ಪರ ವಾದ- ಜಾಗತಿಕ ಮನ್ನಣೆಗೆ ಇದು ಅನಿವಾರ್ಯ: ಜಿಲ್ಲೆಯನ್ನು ಮಂಗಳೂರು ಎಂದು ಮರುನಾಮಕರಣ ಮಾಡುವುದರಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಾರ, ಹೂಡಿಕೆ ಹಾಗೂ ಶೈಕ್ಷಣಿಕ ವಲಯಕ್ಕೆ ಅಪಾರ ಮೌಲ್ಯ ಬರಲಿದೆ ಎಂಬುದು ಪ್ರಮುಖ ವಾದ. ಈ ಕುರಿತು ಸದನದಲ್ಲಿ ಈ ಹಿಂದೆಯೇ ಧ್ವನಿ ಎತ್ತಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಅವರು ಮರುನಾಮಕರಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
"ಮಂಗಳೂರು ಎಂಬುದು ಜಾಗತಿಕ ಮಟ್ಟದಲ್ಲಿ ಚಿರಪರಿಚಿತವಾಗಿರುವ ಒಂದು ದೊಡ್ಡ 'ಬ್ರ್ಯಾಂಡ್ ನೇಮ್'. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಕನ್ನಡ ಎಂದರೆ ಯಾರಿಗೂ ಸ್ಪಷ್ಟವಾಗಿ ತಿಳಿಯುವುದಿಲ್ಲ. ನಮ್ಮ ಮಕ್ಕಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋದಾಗ ಅಥವಾ ಹೊರರಾಜ್ಯಗಳಲ್ಲಿ ಗುರುತಿಸಿಕೊಳ್ಳುವಾಗ 'ವಿ ಆರ್ ಫ್ರಮ್ ಮಂಗಳೂರು' ಎಂದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಸೇರಿಸಿ 'ಬೆಂಗಳೂರು' ಬ್ರ್ಯಾಂಡ್ ಮೌಲ್ಯವನ್ನು ಬಳಸಿಕೊಂಡಂತೆ, ನಮ್ಮ ಜಿಲ್ಲೆಯ ಬೆಳವಣಿಗೆಗೂ ಮಂಗಳೂರು ಹೆಸರು ಅತ್ಯಗತ್ಯ. 1997ರಲ್ಲಿ ಜಿಲ್ಲೆ ವಿಭಜನೆಯಾದಾಗ ಉಡುಪಿಯವರು ತಮ್ಮ ಜಿಲ್ಲಾ ಕೇಂದ್ರದ ಹೆಸರನ್ನೇ ಇಟ್ಟುಕೊಂಡರು, ನಾವು ಮಾತ್ರ ದಕ್ಷಿಣ ಕನ್ನಡ ಎಂದು ಉಳಿಸಿಕೊಂಡೆವು. ಈಗ ಸರ್ಕಾರ ಕರಡು ಅಧಿಸೂಚನೆ ಮೂಲಕ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದೆ. ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಮಂಗಳೂರು ಹೆಸರು ಅತ್ಯಂತ ಸೂಕ್ತ." ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈಟೀವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಹೆಬ್ಬಾಗಿಲು, ತಾಲೂಕುಗಳ ಅಸ್ಮಿತೆ- ವಿರೋಧದ ಒಳನೋಟ: ಆದರೆ, ದಕ್ಷಿಣ ಕನ್ನಡ ಎಂಬ ಹೆಸರನ್ನು ಬದಲಾಯಿಸುವುದಕ್ಕೆ ಇತಿಹಾಸ ಹಾಗೂ ಭೌಗೋಳಿಕ ನೆಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ
ಕುರಿತು ಮಾತನಾಡಿದ ಖ್ಯಾತ ವೈದ್ಯರು, ಬರಹಗಾರರು ಹಾಗೂ ಚಿಂತಕರಾದ ಡಾ. ಶ್ರೀನಿವಾಸ್ ಕಕ್ಕಿಲಾಯ, ಮಂಗಳೂರು ನಗರವೇ ಇಡೀ ಜಿಲ್ಲೆಯಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ.
ದಕ್ಷಿಣ ಕನ್ನಡ ಎಂಬ ಹೆಸರು ಯಾವುದೋ ಆಕಸ್ಮಿಕವಲ್ಲ; ಕರಾವಳಿಯ ಕಿನಾರೆ (ತೀರ) ಎಂಬುದರಿಂದ ಕೆನರಾ ಬಂತು. ಅದು ಕರುನಾಡಿನ ಅಥವಾ ಕರ್ನಾಟಕದ ಪಶ್ಚಿಮ ಹೆಬ್ಬಾಗಿಲು. ಹೊರಗಿನವರು ಕರ್ನಾಟಕದ ನೆಲಕ್ಕೆ ಪ್ರವೇಶಿಸಿದ್ದು ಇದೇ ಕಡಲತೀರದ ಮೂಲಕ. ಐತಿಹಾಸಿಕವಾಗಿ ಶಿಕ್ಷಣ, ಬ್ಯಾಂಕಿಂಗ್, ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿ ನಿಂತಿದ್ದು 'ದಕ್ಷಿಣ ಕನ್ನಡ' ಜಿಲ್ಲೆಯೇ ಹೊರತು ಕೇವಲ ಮಂಗಳೂರು ನಗರವಲ್ಲ. ದಕ್ಷಿಣ ಕನ್ನಡ ಜಿಲ್ಲೆಯೆಂದರೆ ಕೇವಲ ಮಂಗಳೂರು ಮಾತ್ರವಲ್ಲ; ಬೆಳ್ತಂಗಡಿಗೆ ಧರ್ಮಸ್ಥಳ, ಚಾರ್ಮಾಡಿ ಘಾಟಿ, ಮಲೆನಾಡಿನ ಅಸ್ಮಿತೆಯಿದೆ. ಸುಳ್ಯಕ್ಕೆ ಅರೆಭಾಷೆ, ಮಲೆಕುಡಿಯರ, ಕುಕ್ಕೆ ಸುಬ್ರಹ್ಮಣ್ಯದ ಅಸ್ಮಿತೆಯಿದೆ. ಪುತ್ತೂರಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಇಡೀ ಜಿಲ್ಲೆಯ ವೈವಿಧ್ಯಮಯ ತಾಲೂಕುಗಳ ಮೇಲೆ ಕೇವಲ ಮಂಗಳೂರು ನಗರದ ಗುರುತನ್ನು ಹೇರುವುದು ಸರಿಯಲ್ಲ. ಇತ್ತೀಚಿನ ವರ್ಷಗಳಲ್ಲಿ ಕೋಮು ಪ್ರಕ್ಷುಬ್ಧತೆ, ನೈತಿಕ ಪೊಲೀಸ್‌ಗಿರಿಯಿಂದಾಗಿ ಮಂಗಳೂರಿನ ಹೆಸರಿಗೆ ಮಸಿ ಬಳಿಯಲಾಗಿದೆ. ಆ ಕೆಟ್ಟ ಹೆಸರನ್ನು ಇಡೀ ಶಾಂತಿಯುತ ಜಿಲ್ಲೆಗೆ ವಿಸ್ತರಿಸುವ ಬದಲು, ಮೊದಲು ಮಂಗಳೂರಿನ ಹಳೆಯ ಮರ್ಯಾದೆ ಮತ್ತು ಘನತೆಯನ್ನು ಮರುಸ್ಥಾಪಿಸುವ ಕೆಲಸವಾಗಲಿ."ಎಂದು ಡಾ. ಶ್ರೀನಿವಾಸ್ ಕಕ್ಕಿಲಾಯ ಈಟೀವಿ ಭಾರತಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ನಿರ್ಲಕ್ಷ್ಯ ಮತ್ತು ಆಡಳಿತಾತ್ಮಕ ಗೊಂದಲ: ರಂಗಕರ್ಮಿ ಹಾಗೂ ಚಿಂತಕ ಐ.ಕೆ. ಬೋಳುವಾರು ಅವರು ಹೆಸರು ಬದಲಾವಣೆಯ ಹಿಂದಿನ ರಾಜಕೀಯ ಮತ್ತು ಆಡಳಿತಾತ್ಮಕ ಇಬ್ಬಂದಿತನವನ್ನು ಪ್ರಶ್ನಿಸಿದ್ದಾರೆ.
"ಮದ್ರಾಸ್ ಪ್ರೆಸಿಡೆನ್ಸಿ ಕಾಲದಿಂದಲೂ 'ಕೆನರಾ' ಎಂಬ ಹೆಸರಿನಲ್ಲೇ 'ಕನ್ನಡ' ಅಡಗಿದೆ. ದಕ್ಷಿಣ ಕನ್ನಡ ಎಂಬ ಹೆಸರಿನಲ್ಲಾದರೂ ಕನಿಷ್ಠ 'ಕನ್ನಡ' ಎಂಬ ಪದ ಉಳಿದುಕೊಂಡಿದೆ. ಅದನ್ನು ತೆಗೆದು ಮಂಗಳೂರು ಎಂದು ಮಾಡುವುದು ಯಾರ ಸಂತೋಷಕ್ಕಾಗಿ? ಬಂಟ್ವಾಳದ ಬಿ.ಸಿ.ರೋಡ್ ದಾಟಿದರೆ ಪುತ್ತೂರು, ಬೆಳ್ತಂಗಡಿ, ಸುಳ್ಯದ ಗ್ರಾಮೀಣ ಜನರು ತಾವು ಮಂಗಳೂರಿನವರು ಎಂದು ಕರೆದುಕೊಳ್ಳಲು ಸಾಧ್ಯವೇ? ಆಡಳಿತಾತ್ಮಕ ಅನುಕೂಲಕ್ಕಾಗಿ ಪುತ್ತೂರು ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಕೂಗು ಹಿಂದಿನಿಂದಲೂ ಇದೆ. ಸಾಂಸ್ಕೃತಿಕವಾಗಿ ನೋಡುವುದಾದರೆ, ಮಂಗಳೂರಿನಲ್ಲಿ ಕಳೆದ 40 ವರ್ಷಗಳಿಂದ ಒಂದು ರಂಗಮಂದಿರ ಕಟ್ಟಲು ಸಾಧ್ಯವಾಗಿಲ್ಲ. ಕನ್ನಡ ಶಾಲೆಗಳು ಮುಚ್ಚಿ ಇಂಗ್ಲಿಷ್ ಶಾಲೆಗಳಾಗುತ್ತಿವೆ. ಜಿಲ್ಲೆಯ ಮೂಲ ಸಮಸ್ಯೆಗಳನ್ನು ಬಗೆಹರಿಸದೇ, ಹೆಸರು ಬದಲಾವಣೆ ಮಾಡುವುದರಿಂದ ಜನಸಾಮಾನ್ಯರಿಗೆ ಯಾವ ಲಾಭವೂ ಸಿಗುವುದಿಲ್ಲ. ಜಿಲ್ಲೆಯ ಹೆಸರು ದಕ್ಷಿಣ ಕನ್ನಡ ಎಂದೇ ಉಳಿಯುವುದು ಸೂಕ್ತ.ಎಂದು ಚಿಂತಕ, ರಂಗಕರ್ಮಿ ಐ.ಕೆ.ಬೊಳುವಾರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಅಂಗಳದಲ್ಲಿ ಚೆಂಡು: ಮುಂದಿನ ದಾರಿ ಏನು? ಸರ್ಕಾರ ಸಚಿವ ಸಂಪುಟದಲ್ಲಿ ಕರಡು ಅಧಿಸೂಚನೆಗೆ ಅನುಮೋದನೆ ನೀಡಿರುವುದರಿಂದ, ಅಧಿಕೃತ ಗೆಜೆಟ್ ಪ್ರಕಟವಾದ ದಿನದಿಂದ 30 ದಿನಗಳ ಕಾಲ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಲಿಖಿತ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.
ಜಾಗತಿಕ ಮಟ್ಟದ 'ಬ್ರ್ಯಾಂಡ್ ಮಂಗಳೂರು' ಅಭಿವೃದ್ಧಿ ಮಂತ್ರವೋ ಅಥವಾ ಶತಮಾನಗಳ ಐತಿಹಾಸಿಕ ತಾಲೂಕುಗಳ ಅಸ್ಮಿತೆಯ ‘ದಕ್ಷಿಣ ಕನ್ನಡ’ದ ಉಳಿಸುವಿಕೆ ಎಂಬ ಜಿಜ್ಞಾಸೆ ಈಗ ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಮುಂದಿದೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ ಬಳಿಕವೇ ಸರ್ಕಾರ ಈ ಮರುನಾಮಕರಣದ ಕುರಿತು ಅಂತಿಮ ಅಧಿಸೂಚನೆ ಹೊರಡಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.












