ಕರಾವಳಿ ಅಭಿವೃದ್ಧಿಗೆ ಬಂಪರ್ ಗಿಫ್ಟ್: 32,611 ಕೋಟಿ ರೂ ಯೋಜನೆಗಳಿಗೆ ಸಂಪುಟ ಅಸ್ತು

Coastal Bulletin
ಕರಾವಳಿ ಅಭಿವೃದ್ಧಿಗೆ ಬಂಪರ್ ಗಿಫ್ಟ್: 32,611 ಕೋಟಿ ರೂ ಯೋಜನೆಗಳಿಗೆ ಸಂಪುಟ ಅಸ್ತು

ಮಂಗಳೂರು: ನಾಡಿನ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪಣತೊಟ್ಟಿದೆ. ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆ ಮೂಲಕ ಕರಾವಳಿ ಭಾಗದ ಪ್ರಗತಿಗೆ ಹೊಸ ಮುನ್ನುಡಿ ಬರೆಯಲಾಗಿದೆ. ಸಭೆಯಲ್ಲಿ 40 ವಿಷಯದ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ನಾವು ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ ಎಂದ ಸಿಎಂ 

ಸಚಿವ ಸಂಪುಟ ಸಭೆ ಬಳಿಕ ಮಂಗಳೂರಿನ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಡಿಕೆ ಶಿವಕುಮಾರ್, ತುಳುನಾಡಿನ ತಂದೆ, ತಾಯಿ ಹಾಗೂ ಯುವ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ, ‘ಈ ಜಿಲ್ಲೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಇಲ್ಲಿನ ಇತಿಹಾಸ ಮತ್ತು ಪರಂಪರೆಯನ್ನು ರಾಷ್ಟ್ರವೇ ಗೌರವಿಸುತ್ತದೆ. ಈ ಜಿಲ್ಲೆಗೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ, ನಾನು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ಹೊರಗೆ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಜನರ ಮುಂದೆ ಕೂತಿದ್ದೇನೆ. ಭಾವನಾತ್ಮಕ ವಿಚಾರಗಳಿಗಿಂತ ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ’ ಎಂದು ಹೇಳಿದರು.

32,611 ಕೋಟಿ ರೂ ಅನುದಾನ; ಗ್ರಾಮೀಣ ಹಾಗೂ ಕರಾವಳಿ ಭಾಗಕ್ಕೆ ಸಮಪಾಲು

ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಅಭಿವೃದ್ಧಿ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಪೈಕಿ 16,000 ಕೋಟಿ ರೂ ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿ ರೂ ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ 14,000 ಕೋಟಿ ರೂ ಅನುದಾನ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಇನ್ಮುಂದೆ ಮಂಗಳೂರು ಜಿಲ್ಲೆ

‘ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸುವ ಪ್ರಸ್ತಾಪವನ್ನು ಸಂಪುಟ ಸಭೆ ಪರಿಗಣಿಸಲಾಗಿದೆ. ಈ ಸಂಬಂಧ ಸಾರ್ವಜನಿಕ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಕ್ಕಾಗಿ ಒಂದು ತಿಂಗಳ ಕಾಲ ಕರಡು ಅಧಿಸೂಚನೆ ಹೊರಡಿಸಲಾಗುತ್ತದೆ. ಸಾರ್ವಜನಿಕರ ಅಭಿಪ್ರಾಯ ಪಡೆದ ನಂತರ, ಒಂದು ತಿಂಗಳ ಒಳಗೆ ಅಧಿಕೃತವಾಗಿ ಜಿಲ್ಲೆಯ ಹೆಸರನ್ನು ಬದಲಾಯಿಸುವ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ಹೊಸ ಪ್ರವಾಸೋದ್ಯಮ ನೀತಿ

‘ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಹೊಸ ಟೂರಿಸಂ ನೀತಿಯನ್ನು ಮೂಲಸೌಕರ್ಯ ಯೋಜನೆಯನ್ನಾಗಿ ರೂಪಿಸಿ ಜಾರಿಗೆ ತರಲಾಗುತ್ತಿದೆ. ಮೀನುಗಾರಿಕೆ, ಸಾಗರ ಅಧ್ಯಯನ ಮತ್ತು ಬ್ಲೂ ಎಕನಾಮಿಕ್ಸ್‌ಗಾಗಿ ಪ್ರತ್ಯೇಕ ಯೂನಿವರ್ಸಿಟಿ ಸ್ಥಾಪಿಸಲಾಗುವುದು ಹಾಗೂ ಸೀಟುಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಹೆಚ್ಚಿಸಲಾಗುವುದು. ಇನ್ನು ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇನ್ನು ಮುಂದಿನ 15 ತಿಂಗಳಲ್ಲಿ ರಾಜ್ಯದ 10 ರಿಂದ 12 ಜಿಲ್ಲೆಗಳಲ್ಲಿ ಇದೇ ರೀತಿ ಸಂಪುಟ ಸಭೆಗಳನ್ನು ನಡೆಸಿ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಯಾವ ಯಾವ ಯೋಜನೆಗೆ ಎಷ್ಟು ಅನುದಾನ?

ಲೈಟ್ ಹೌಸ್ ಮತ್ತು ಅದರ ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ 60.34 ಕೋಟಿ ರೂ ಅನುದಾನ.

ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರು ಅಭಿವೃದ್ಧಿಗೆ 6,925 ಕೋಟಿ ರೂ ಅನುದಾನ.

ಉಡುಪಿಯ ಮಲ್ಪೆ ಆಯಬದಲ್ಲಿ ಪಿಪಿಪಿ ಮಾದರಿ ಯೋಜನೆಗಾಗಿ 179 ಕೋಟಿ ರೂ ಅನುದಾನ.

ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಅಂಗವಾಗಿ ಭಾರತೀಯ ನೌಕಾಪಡೆಯಿಂದ 250 ಕೋಟಿ ರೂ ವೆಚ್ಚದಲ್ಲಿ ರನ್‌ವೇ ನಿರ್ಮಾಣ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಟೆಪುರದಿಂದ ಚರ್ವತ್ತೂರು ಸಂಪರ್ಕ ಯೋಜನೆಗೆ ಅನುದಾನ.

ಮಂಗಳೂರು-ಅತ್ರಾಡಿ ಮಾರ್ಗದ ಮರವೂರು ಸೇತುವೆ ಕಾಮಗಾರಿಗೆ 40 ಕೋಟಿ ರೂ ಅನುದಾನ.

ಕಟೀಲು ರಸ್ತೆ ಅಭಿವೃದ್ಧಿಗೆ 33 ಕೋಟಿ ರೂ ಅನುದಾನ.

14px;">ಮುಲ್ಕಿಯ ದಾಮಸ್ ಕಟ್ಟೆ ಬಳಿಯ ಪಾಲಿಮಾರ್ ಕಟ್ಟೆ ಸೇತುವೆ ನಿರ್ಮಾಣಕ್ಕೆ 25 ಕೋಟಿ ರೂ ಅನುದಾನ.

ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ ಅನುದಾನ.

ಕದ್ರಿಯ 5 ಎಕರೆ ಜಾಗದಲ್ಲಿ ‘ಮಂಗಳೂರು ಐ’ ನಿರ್ಮಾಣ.

ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ 425 ಕೋಟಿ ರೂ ಅನುದಾನ.

ಮಠ-ಮಾನ್ಯಗಳಿಗೆ ಬಂಪರ್‌ ಗಿಫ್ಟ್

ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ ಅನುದಾನ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು 5 ಕೋಟಿ ರೂ.

ಒಡಿಯೂರು ಮಠ, ವಿಟ್ಲ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.

ಶ್ರೀ ಧಾಮ ಮಾಣಿಲ ಮಠ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.

ಮಾಣಿಲಾ ಗ್ರಾಮ ಕುಕ್ಕಾಜೆ ಕಾಳಿಕಾಂಬ ಆಂಜನೇಯ ಸ್ವಾಮಿ ಕ್ಷೇತ್ರ: 1 ಕೋಟಿ ರೂ.

ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ, ಕನ್ಯಾ ಗ್ರಾಮ: 1 ಕೋಟಿ ರೂ.

ಪಿಳ್ಳಿ ಚಾಮುಂಡಿ ದೈವಸ್ಥಾನ ಕೊಂಡನ, ಕೋಟೆಕಾರ್ (ಉಳ್ಳಾಲ): 1 ಕೋಟಿ ರೂ.

ಶ್ರೀ ರಾಮ ಕ್ಷೇತ್ರ, ಕನ್ಯಾಡಿ (ದಕ್ಷಿಣ ಕನ್ನಡ): 1 ಕೋಟಿ ರೂ.

ಕೇಮಾರು ಮಠ, ಶ್ರೀ ಸಾಂದೀಪನಿ ಸಾಧನಾಶ್ರಮ: 1 ಕೋಟಿ ರೂ.

ಕಂಬಳಕ್ಕೆ ನೀಡುತ್ತಿದ್ದ 40 ಲಕ್ಷ ರೂ ಅನುದಾನವನ್ನು 1 ಕೋಟಿ ರೂ ಏರಿಕೆ ಮಾಡಲಾಗಿದೆ.

ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೆರವು

ಸೈಯದ್ ಮದನಿ ಜುಮ್ಮಾ ಮಸೀದಿ (ಉಳ್ಳಾಲ ದರ್ಗಾ): 5.00 ಕೋಟಿ ರೂ.

ದಾರುನ್ನೂರು ಎಜುಕೇಶನಲ್ ಸೆಂಟರ್, ಕಾಶಿಪಟ್ಣ (ಬೆಳ್ತಂಗಡಿ): 1.50 ಕೋಟಿ ರೂ.

ಅಲ್-ಮರ್ಕಜುಲ್ ಇಸ್ಲಾಮಿ (ರಿ), ಅಡ್ಯಾರ್ (ಮಂಗಳೂರು): 1.50 ಕೋಟಿ ರೂ.

ಶಾಂತಿ ಎಜುಕೇಶನಲ್ ಟ್ರಸ್ಟ್, ಕುತ್ತಾರು/ಬಬ್ಬುಕಟ್ಟೆ (ಉಳ್ಳಾಲ): 1 ಕೋಟಿ ರೂ.

ಮರಿಕ್ಕಳ ಜುಮ್ಮಾ ಮಸೀದಿ, ನರಿಂಗಾನ ಗ್ರಾಮ (ಸ್ಟಡಿ ಸೆಂಟರ್ ಮತ್ತು ವಾಚನಾಲಯ): 1 ಕೋಟಿ ರೂ.

ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ (KIA), ಕುಂಬ್ರ (ಪುತ್ತೂರು): 1 ಕೋಟಿ ರೂ.

ಮರ್ಕಜುಲ್ ಹುದಾ ಮಹಿಳಾ ಕಾಲೇಜು, ಕುಂಬ್ರ (ಪುತ್ತೂರು): 1 ಕೋಟಿ ರೂ.

ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್, ಮಂಗಳೂರು: 1 ಕೋಟಿ ರೂ.

ಸಂತ ಜೋಸೆಫ್ ವಾಜ್ ಶ್ರೈನ್, ಮುಡಿಪು (ಉಳ್ಳಾಲ):1 ಕೋಟಿ ರೂ.

ಇನ್‌ಫೆಂಟ್ ಜೀಸಸ್ ಶ್ರೈನ್, ಬಿಕರ್ನಕಟ್ಟೆ (ಮಂಗಳೂರು): 50 ಲಕ್ಷ ರೂ.

ಸೇಂಟ್ ಲಾರೆನ್ಸ್ ಶ್ರೈನ್, ಬೊಂದೇಲ್ (ಮಂಗಳೂರು): 50 ಲಕ್ಷ ರೂ

ಮುಲ್ಕಿಯಲ್ಲಿ 150 ಎಕರೆಯಲ್ಲಿ ಬೃಹತ್ ಫಿಶರೀಸ್ ಪಾರ್ಕ್

ಮೀನುಗಾರಿಕೆಗೆ ಕೈಗಾರಿಕಾ ಸ್ಪರ್ಶ ನೀಡಲು ನಿರ್ಧರಿಸಲಾಗಿದ್ದು, ಫಿಶರೀಸ್ ಪಾರ್ಕ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಮುಲ್ಕಿ ತಾಲ್ಲೂಕಿನ ಕೊಲ್ಲೂರು, ಬಳ್ಳುಂಜೆ ಮತ್ತು ಉಳಿಪಾಡಿ ಗ್ರಾಮಗಳಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ 316.79 ಎಕರೆ ಜಮೀನಿನ ಪೈಕಿ 150 ಎಕರೆ ಜಾಗವನ್ನು ಫಿಶರೀಸ್ ಪಾರ್ಕ್‌ಗಾಗಿ ಮೀಸಲಿಡಲಾಗಿದೆ. ಜೊತೆಗೆ ಕೆರೆಬೆಟ್ಟು, ಶಿವಪುರ ಗ್ರಾಮಗಳಲ್ಲಿ 113.89 ಎಕರೆ ಜಮೀನಿನಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಡೇಟಾ ಸೆಂಟರ್‌ಗಳು, ನೂತನ ಕಾರ್ಖಾನೆಗಳು, ಉತ್ಪಾದನಾ ಘಟಕಗಳ ಸ್ಥಾಪನೆಗೆ ಜಮೀನು ಹಂಚಿಕೆ ಮಾಡಲಾಗಿದೆ.

Leave a Comment