ಬಂಟ್ವಾಳ: ರಸ್ತೆಯಲ್ಲಿ ಪತ್ತೆಯಾದ ಸುಮಾರು ₹5 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಾರಸುದಾರರನ್ನು ಪತ್ತೆಹಚ್ಚಿ ಹಿಂದಿರುಗಿಸುವ ಮೂಲಕ ಬಂಟ್ವಾಳ ನಗರ ಠಾಣೆಯ ಪೊಲೀಸರಿಬ್ಬರು ಪ್ರಾಮಾಣಿಕತೆ ಮತ್ತು ಮಾನವೀಯತೆ ಮೆರೆದಿದ್ದಾರೆ.
ನ. 4ರಂದು ಅಮ್ಟಾಡಿ ಗ್ರಾಮದ ಗ್ಲೆವಿನ್ ಎಲೆಕ್ಟ್ರಿಕಲ್ಸ್ ಮಾಲೀಕ ರೋನಿ ಡಿಸೋಜಾ ಅವರು ಬಿ.ಸಿ.ರೋಡ್ನಲ್ಲಿ ಸುಮಾರು 45 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಇದರ ಮೌಲ್ಯ ಅಂದಾಜು ₹5 ಲಕ್ಷ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಅವರು ಯಾವುದೇ ಪೊಲೀಸ್ ದೂರು ದಾಖಲಿಸಿರಲಿಲ್ಲ.
ಇದೇ ದಿನ ಬಂಟ್ವಾಳ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೃಷ್ಣ ನಾಯಕ್ (HC 305) ಅವರು ರೌಡಿ ಸ್ಕ್ವಾಡ್ ಕರ್ತವ್ಯದಲ್ಲಿದ್ದ ವೇಳೆ ಬಿ.ಸಿ.ರೋಡ್ನಲ್ಲಿ ಚಿನ್ನದ ಸರ ಪತ್ತೆಹಚ್ಚಿದ್ದರು. ಬಳಿಕ ಈ ವಿಚಾರವನ್ನು ಹೆಡ್ ಕಾನ್ಸ್ಟೇಬಲ್ ಸುರೇಶ್ ಅವರಿಗೆ ತಿಳಿಸಿದ್ದರು.
ಇತ್ತೀಚೆಗೆ ರೋನಿ ಡಿಸೋಜಾ ಅವರು ಹೆಡ್ ಕಾನ್ಸ್ಟೇಬಲ್ ಸುರೇಶ್ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಚಿನ್ನದ ಸರ
ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಕೃಷ್ಣ ನಾಯಕ್ ಮತ್ತು ಸುರೇಶ್ ಅವರು ಪತ್ತೆಯಾಗಿದ್ದ ಚಿನ್ನದ ಸರವನ್ನು ಪರಿಶೀಲಿಸಿ ವಾರಸುದಾರರಾದ ರೋನಿ ಡಿಸೋಜಾ ಅವರಿಗೆ ಹಿಂದಿರುಗಿಸಿದ್ದಾರೆ.
ತಾವು ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಮರಳಿ ದೊರೆತ ಹಿನ್ನೆಲೆಯಲ್ಲಿ ರೋನಿ ಡಿಸೋಜಾ ಅವರು ಸಂತಸ ವ್ಯಕ್ತಪಡಿಸಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ತವ್ಯದ ಜತೆಗೆ ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಮಾನವೀಯತೆಯನ್ನು ಮೆರೆದ ಹೆಡ್ ಕಾನ್ಸ್ಟೇಬಲ್ ಕೃಷ್ಣ ನಾಯಕ್ ಹಾಗೂ ಸುರೇಶ್ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಾರ್ವಜನಿಕರ ಆಸ್ತಿಯ ರಕ್ಷಣೆಯಲ್ಲೂ ಪೊಲೀಸ್ ಸಿಬ್ಬಂದಿ ತೋರುವ ಇಂತಹ ಬದ್ಧತೆ ಇಲಾಖೆಯ ಗೌರವವನ್ನು ಹೆಚ್ಚಿಸಿದೆ.










