ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ. ಶಿಕ್ಷಣ, ಸೇವೆ, ಸಾಮರಸ್ಯದ ಹರಿಕಾರ ಸುಬ್ಬರಾವ್ ಪೈ: ರಂಗನಾಥ ಭಟ್

Coastal Bulletin
ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ. ಶಿಕ್ಷಣ, ಸೇವೆ, ಸಾಮರಸ್ಯದ ಹರಿಕಾರ ಸುಬ್ಬರಾವ್ ಪೈ: ರಂಗನಾಥ ಭಟ್

ಬಂಟ್ವಾಳ : ಅನ್ಯರಲ್ಲಿನ ಒಳ್ಳೆಯತನವನ್ನು ಗುರುತಿಸುವ ಹೃದಯವಂತಿಕೆ, ದೂರದರ್ಶಿತ್ವ, ಮಹಿಳಾ ಸಬಲೀಕರಣದ ಕಾಳಜಿ ಹಾಗೂ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡು ಸಾಮರಸ್ಯದ ಬದುಕು ನಡೆಸುವ ಜೀವನ ಮೌಲ್ಯಗಳು ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಬದುಕಿನ ಸಂದೇಶಗಳಾಗಿವೆ. ಈ ಮೌಲ್ಯಗಳು ಇಂದಿಗೂ ಎಲ್ಲರಿಗೂ ಆದರ್ಶ ಮತ್ತು ಅನುಕರಣೀಯ ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಎಂ. ರಂಗನಾಥ ಭಟ್ ಹೇಳಿದರು.

ಅವರು ಗುರುವಾರ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಸಭಾಂಗಣದಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರ 174ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸೇವಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ 'ಸುಖಿನೋ ಭವ' ವೈದ್ಯಕೀಯ ಶಿಬಿರವನ್ನು ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಮಿತ್ರ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು. ಪೊಳಲಿಯ ಶ್ರೀ ರಾಜರಾಜೇಶ್ವರಿ ಸರ್ಕಾರಿ ಪ್ರೌಢಶಾಲೆ ಹಾಗೂ ಕೊಡ್ಮಣ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಕಾಲೇಜಿನ ಆವರಣದಲ್ಲಿ ಸರ್ಕಾರಿ ಶಾಲಾ ಮಕ್ಕಳ ಕಲಿಕೆ ಮತ್ತು ಸಂವಾದಕ್ಕೆ ಅವಕಾಶ ಕಲ್ಪಿಸುವ 'ಉಡಾನ್' ಶಾಲಾ ಸಂಪರ್ಕ ಕಾರ್ಯಕ್ರಮ ಹಾಗೂ ಯುವ ಮನಸ್ಸುಗಳಿಗೆ ಅನುಭವಾತ್ಮಕ ಕಲಿಕೆಯ ಅವಕಾಶ ಒದಗಿಸುವ

'ಸ್ಪಾರ್ಕ್' (SPARK) ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ರಸಾಯನಶಾಸ್ತ್ರ ಪ್ರಯೋಗಗಳು, ಕೃತಕ ಬುದ್ಧಿಮತ್ತೆ (AI) ಪರಿಕರಗಳ ಪರಿಚಯ ಮತ್ತು ಡ್ರೋನ್ ಪ್ರದರ್ಶನಗಳು ಗಮನ ಸೆಳೆದವು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ವತಿಯಿಂದ ರಕ್ತದಾನಿಗಳ ನೋಂದಣಿ ಅಭಿಯಾನ ಹಾಗೂ 'ಲಿಕ್ವಿಡ್ ಲವ್' ಕಾರ್ಯಕ್ರಮ ನಡೆಯಿತು. ಭೇಟಿಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳ ಶಿಕ್ಷಕರಿಗೆ 'ಉತ್ತಮ ಹಸಿರು ನಾಳೆಗಾಗಿ ಒಂದು ಸಸಿ' ಎಂಬ ಆಶಯದೊಂದಿಗೆ ಸಸಿಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿನಿ ನಿಶ್ರೀನ್ ಆಲಿ ಮತ್ತು ಬಳಗದವರು ಮನರಂಜನಾ ಹಾಗೂ ಅದೃಷ್ಟ ಸ್ಪರ್ಧೆಗಳನ್ನು ಆಯೋಜಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿನಿ ವಿನಿಶಾ ಭಟ್ ಸ್ವಾಗತಿಸಿದರು. ಅಪರ್ಣಾ ಭಟ್ ಅವರು ಅಮ್ಮೆಂಬಳ ಸುಬ್ಬರಾವ್ ಪೈ ಕುರಿತು ತಾವು ಪ್ರಥಮ ಸ್ಥಾನ ಪಡೆದ ಪ್ರಬಂಧವನ್ನು ಮಂಡಿಸಿದರು. ಸುಹಾನಾ ರಾಣೆ ವಂದಿಸಿದರು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಗಣ್ಯರು, ವಿದ್ಯಾರ್ಥಿ ಪ್ರತಿನಿಧಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂಸ್ಥಾಪಕರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

Leave a Comment