ಪಣೋಲಿಬೈಲು: ನ.23ರಂದು ನೂತನ ಅನ್ನಛತ್ರ ಕಟ್ಟಡ ಲೋಕಾರ್ಪಣೆ. ನ.25ರಂದು ವರ್ಷಾವಧಿ ಕೋಲ

Coastal Bulletin
ಪಣೋಲಿಬೈಲು: ನ.23ರಂದು ನೂತನ ಅನ್ನಛತ್ರ ಕಟ್ಟಡ ಲೋಕಾರ್ಪಣೆ. ನ.25ರಂದು ವರ್ಷಾವಧಿ ಕೋಲ

ಬಂಟ್ವಾಳ: ತಾಲೂಕಿನ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ  ಆವರಣದಲ್ಲಿ ನಿರ್ಮಿಸಲಾದ ನೂತನ ಅನ್ನಛತ್ರ ಕಟ್ಟಡವು ನ.23ರಂದು ಲೋಕಾರ್ಪಣೆಗೊಳ್ಳಲಿದೆ ಹಾಗೂ ನ.25ರಂದು ವರ್ಷಾವಧಿ ಕೋಲ ಕಾರ್ಯಕ್ರಮ ನಡೆಯಲಿದೆ.

ನ.23ರಂದು ಬೆಳಗ್ಗೆ 10.30ಕ್ಕೆ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6ರಿಂದ ದೀಪೋಜ್ವಲನ, ಕುಣಿತ ಭಜನೆ, ಸ್ವರತರಂಗ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8ಕ್ಕೆ ಪರಮಾತ್ಮ ಪಂಜುರ್ಲಿ ನಾಟಕ ಹಾಗೂ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ನ.24ರಂದು ಸಂಜೆ 7.30ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ರಿಂದ ಪಾವಂಜೆ ಮೇಳದವರಿಂದ 'ಲಲಿತೋಪಾಖ್ಯಾನ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ನ.25ರಂದು ವರ್ಷಾವಧಿ ಕೋಲದ ಅಂಗವಾಗಿ ಬೆಳಗ್ಗೆ 8ರಿಂದ ನವಕ ಕಲಶ ಪ್ರದಾನ, ಗಣಹೋಮ, ನಾಗತಂಬಿಲ

ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಸಂಜೆ 6ಕ್ಕೆ ಶ್ರೀಕೃಷ್ಣ ಮಂದಿರದಿಂದ ಕ್ಷೇತ್ರಕ್ಕೆ ಭವ್ಯ ಮೆರವಣಿಗೆ ನಡೆಯಲಿದ್ದು, ಶ್ರೀ ಗೆಜ್ಜೆಗಿರಿ ಮೇಳದವರಿಂದ 'ಗಜೇಂದ್ರ ಮೋಕ್ಷ ರಕ್ತರಾತ್ರಿ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ರಾತ್ರಿ 10ಕ್ಕೆ ಲಕುಮಿ ತಂಡದ ಕುಸಾಲ ಕಲಾವಿದೆರ್ ಅಭಿನಯದ ನೂತನ ತುಳು ನಾಟಕ 'ಚಂದ್ರಾವತಿ' ಪ್ರದರ್ಶನವಾಗಲಿದೆ. ರಾತ್ರಿ 10.30ಕ್ಕೆ ಭಂಡಾರದ ಮನೆಯಿಂದ ದೈವಗಳ ಭಂಡಾರ ತಂದು, 11ಕ್ಕೆ ಕಲ್ಲುರ್ಟಿ ದೈವದ ವರ್ಷಾವಧಿ ಕೋಲ ನಡೆಯಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ದಿವಾಕರ ಮುಗುಳ್ಯ ತಿಳಿಸಿದ್ದಾರೆ.

Leave a Comment