ಮಂಗಳೂರು: ಕಾಲೇಜು ಕ್ಯಾಂಪಸ್ನಿಂದಲೇ ವಿದ್ಯಾರ್ಥಿನಿಯನ್ನು ಪೋಷಕರು ಬಲವಂತವಾಗಿ ಅಪಹರಿಸಿ ಹೊತ್ತೊಯ್ದ ಘಟನೆ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಹಿಂದೂ ಯುವಕನನ್ನು ಮುಸ್ಲಿಂ ಯುವತಿ ಪ್ರೀತಿ ಮಾಡುತ್ತಿದ್ದ ಹಿನ್ನೆಲೆ ವಿದ್ಯಾರ್ಥಿನಿಯನ್ನ ಅಪಹರಣ ಮಾಡಿರುವ ಆರೋಪ ಕೇಳಿಬಂದಿದೆ. ಥಾರ್ ವಾಹನದಲ್ಲಿ ವಿದ್ಯಾರ್ಥಿನಿಯನ್ನ ಹೊತ್ತೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಿಷ್ಟು
ವಿಡಿಯೋ ವೈರಲ್ ಬೆನ್ನಲ್ಲೇ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ‘ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕುಟುಂಬದ ಸದಸ್ಯರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವಿದೆ. ಈ ರೀತಿಯ ಕೃತ್ಯವೂ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ವಯಸ್ಕಳಾದ ಯುವತಿಗೆ ತನ್ನ ವಾಸಸ್ಥಳ ನಿರ್ಧರಿಸುವ ಹಕ್ಕಿದೆ
‘ಯುವತಿ ಪ್ರಾಪ್ತವಯಸ್ಕಳಾಗಿದ್ದು, ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು
ಆಕೆಗಿದೆ’ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ‘ಘಟನೆ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ವಾಹನ ಹೆಚ್ಚು ದೂರ ಸಾಗುವ ಮುನ್ನವೇ ತಡೆದು ಯುವತಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿತ್ತು’ ಎಂದು ಅವರು ಹೇಳಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಹಾಗೂ ಯುವತಿಯನ್ನು ಪತ್ತೆಹಚ್ಚುವಂತೆ ಸೂಚನೆ ನೀಡಲಾಗಿದೆ’ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ‘ಟ್ವೀಟ್ನಲ್ಲಿ ಉಲ್ಲೇಖಿಸಿರುವಂತೆ, ಯುವತಿಗೆ ಹಿಂದೂ ಯುವಕನೊಂದಿಗೆ ಪ್ರೀತಿಯ ಸಂಬಂಧ ಇರುವ ಮಾಹಿತಿ ಲಭ್ಯವಾಗಿದೆ’ ಎಂದು ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.









