ಎ.ಬಿ ಪಚ್ಚು ಮೂಡುಬಿದಿರೆ

ಏನೇ ಬದಲಾವಣೆಗಳನ್ನು ತಂದರೂ,ಕಾಲ ಕಾಲಕಾಲಕ್ಕೆ ಎಷ್ಟೇ ಬದಲಾಗುತ್ತಾ ಹೋದರೂ ಈ ಕಂಬಳದೊಳಗಿನ ಆ ಒಂದು ಅಸಲಿ ತಿರುಳು ಮತ್ತದರ ಸ್ವಾದ ಇನ್ನೂ ಹಾಗೆಯೇ ಇದೆ.ಅದು ಬದಲಾಗುವುದಿಲ್ಲ,ಏಕೆಂದರೆ ಅದು ಬದಲಾಗುವಂತಹದ್ದೇ ಅಲ್ಲ.

ಅನುಭವದ ಹಿರಿಯರು,ಉತ್ಸಾಹದ ಕಿರಿಯರು ಎಲ್ಲರೂ ಇಲ್ಲಿ ಒಟ್ಟೊಟ್ಟಿಗೆಯೇ ಸಿಗುತ್ತಾರೆ.ಕೆಲವರಿಗೆ ಇದೊಂದು ಕ್ರೀಡೆ,ಇನ್ನು ಕೆಲವರಿಗೆ ಇದೊಂದು ಪರಂಪರೆ,ಮತ್ತೆ ಹಲವರಿಗೆ ಇದೊಂದು ಒಂದಿಷ್ಟು ಗಮ್ಮತ್ತು,ಆದರೆ ಬಹಳಷ್ಟು ಜನರಿಗೆ ಕಂಬಳ ಎನ್ನುವುದೇ ಒಂದು ಉಲ್ಲಾಸ ಉತ್ಸಾಹದ ಜಾತ್ರೆ.ಆದರೂ ಇತ್ತೀಚಿನ ದಿನಗಳಲ್ಲಿ ಕಂಬಳದಲ್ಲಿ ಕೋಣ ಓಡಿಸುವವ ಮತ್ತು ಆ ಕೋಣಗಳನ್ನು ಸಾಕಿದ ಯಜಮಾನ ಅದೊಂದು ಹೆದರಿಕೆಯಿಂದ ಬಹಳಷ್ಟು ಬಳಲಿದ್ದಾನೆ.ಅದೇ ಪ್ರಾಣಿ ದಯಾ ಸಂಘ!.

ಹಿಂದೆ ಎಲ್ಲ ಕಂಬಳದಲ್ಲಿ ಪೋಟೋ ತೆಗೆಯುವುದೆಂದರೆ ಅದೊಂದು ಬೇರೆಯೇ ಅನುಭವ,ಬೇರೆಯೇ ಗತ್ತು ಗಮ್ಮತ್ತು.ನಾಡಿನ ಖ್ಯಾತ ಪೋಟೋಗ್ರಾಫರ್ ಗಳು,ಹವ್ಯಾಸಿ ಪೋಟೋಗ್ರಾಫರ್ ಗಳು ಮಾತ್ರವಲ್ಲ ಅಂತರಾಷ್ಟ್ರೀಯ ಪೋಟೋಗ್ರಾಫ್ ರ್ ಗಳು ಕೂಡ ದೊಡ್ಡ ದೊಡ್ಡ ಕ್ಯಾಮರಾಗಳೊಂದಿಗೆ ಕಂಬಳದ ಕರೆಯ ಎರಡೂ ಬದಿಯಲ್ಲಿ ಸಂತೆ ಸೇರುತ್ತಿದ್ದದ್ದು ಉಂಟು.ಊರಿನಲ್ಲಿ ಡಿ.ಎಸ್.ಎಲ್.ಆರ್ ಕ್ಯಾಮರಾ ಇದ್ದವನೇ ಆ ದಿನದ ರಾಜ.ಈಗಲೂ ಕಂಬಳದ ಓಟಕ್ಕೆ ಅದರದ್ದೊಂದು ಓಘಕ್ಕೆ ತಡೆಯಾಗದಂತೆ ಪೋಟೋ ತೆಗೆಯಬಹುದು.ತೆಗೆಯುತ್ತಾರೆ ಕೂಡ.ಅಂತಹ ಸಮಸ್ಯೆ ಏನಿಲ್ಲ.ಆದರೆ ಬಹಳ ಹತ್ತಿರದಿಂದ ಅಂದರೆ ಕೋಣಗಳ ಬಳಿ ನಡೆದು ಈಗ ಪೋಟೋ ತೆಗೆಯಲು ನಾವುಗಳು ಹೋದರೆ ಅದರಲ್ಲೂ ಜಸ್ಟ್ ಮೊಬೈಲ್ ನಿಂದ ಪೋಟೋ ತೆಗೆದರೂ ಕೂಡ ಕೋಣದ ಮಾಲಿಕ,ಇಲ್ಲವೇ ಕೋಣ ಓಡಿಸುವವ ಒಂದಿಷ್ಟು ಆತಂಕದಿಂದಲೇ ಕೇಳುತ್ತಾನೆ " ಅಣ್ಣ.. ಪ್ರಾಣಿ ದಯಾತಕ್ಲೆಗ್ ಕಡಪುರ್ರೆ ಅತ್ತ್ ಅತೆ ಉಂದು ಪೋಟೋ ಪುರ ದೆಪ್ಪುನಿ? (ಪ್ರಾಣಿ ದಯಾ ಸಂಘದವರಿಗೆ ಕಳುಹಿಸ್ಲಿಕ್ಕೆ ಅಲ್ಲ ಅಲ್ವಾ ಈ ಪೋಟೋ ತೆಗೆಯುವುದು?)" ಎಂದೇ ಕೇಳುತ್ತಾನೆ..!

ಅವರ ಈ ಹೆದರಿಕೆ ಸಹಜವಾದದ್ದೇ.ಹಿಂದೆ ಈ ಅಳುಕು ಇರಲಿಲ್ಲ.ಪ್ರಾಣಿ ದಯಾ ಸಂಘ ಕೂಡ ಕಂಬಳದ ಕರೆಯ ಅಂಚಿಗೂ ಕಾಲಿಟ್ಟಿರಲಿಲ್ಲ.ಆದರೆ ಈಗ ಕೋಣದ ಯಜಮಾನನಿಗೆ ಮತ್ತು ಆಯೋಜಕರಿಗೆ ಕಂಬಳದ ಅಷ್ಟೂ ಜನರ ನಡುವೆ ಈ ಪ್ರಾಣಿ ದಯಾ ಸಂಘದ ಸದಸ್ಯರು ಕೂಡ ಇದ್ದಾರೆ,ಈಗಲೂ ಇದ್ದಾರೆ ಮತ್ತು ಅವರು ಗೊತ್ತಿಲ್ಲದಂತೆಯೇ ಪೋಟೋ ತೆಗೆಯುತ್ತಾರೆ,ಆ ನಂತರ ಸಂಬಂಧ ಪಟ್ಟವರಿಗೆ 'ಇಲ್ಲಿ ಹಿಂಸೆ ನಡೆಯುತ್ತಿದೆ' ಎಂಬ ವರದಿಯನ್ನು ಗುಪ್ತವಾಗಿ ಸಲ್ಲಿಸುತ್ತಾರೆ ಎಂಬ ಭಯವಂತು ಖಂಡಿತವಾಗಿಯೂ ಇಂದು ಅವರೆಲ್ಲರಲ್ಲೂ ಒಳಗೊಳಗೆಯೇ ಬಹಳಷ್ಟು ಇದೆ.

ಕಂಬಳವನ್ನು ಈ ಪ್ರಾಣಿ ದಯಾ ದಂತಹ ಸಂಘಟನೆ ಕೇವಲ ಕ್ರೀಡೆಯ ರೀತಿಯಲ್ಲಿ ಅದರಲ್ಲೂ ಹಿಂಸೆಯ ಕ್ರೀಡೆ ಎಂಬ ರೀತಿಯಲ್ಲಿ ಮಾತ್ರವೇ ನೋಡುತ್ತಿದೆಯೇ ಹೊರತು ಅದರಾಚೆಗಿನ ಕಥೆಗಳನ್ನು ಕೇಳಲು ಅದು ತಯಾರಿಲ್ಲ.ಆದರೆ ಕಂಬಳ ನಿನ್ನೆ ಮೊನ್ನೆ ಈ ಮಣ್ಣಿನಲ್ಲಿ ಹುಟ್ಟಿದ್ದಲ್ಲ.ಅದಕ್ಕೊಂದು ಭವ್ಯವಾದ ಪರಂಪರೆ ಇದೆ.ಶತಮಾನಗಳ ಆಚೆಯ ಇತಿಹಾಸವಿದೆ.ಅರಸು ಕಂಬಳದಂತಹ ಪಾರಂಪರಿಕ ಕಂಬಳವೇ ನಮ್ಮಲ್ಲಿ ಉಂಟು.ತುಳುನಾಡಿನ ಕಾರಣಿಕದ ವೀರ ಪುರುಷರ ಹೆಸರಿನೊಂದಿಗೆಯೇ ನಡೆಯುವ ನಮ್ಮ ಕಂಬಳದಲ್ಲಿ ಬಹಳಷ್ಟು ಭಯ ಭಕ್ತಿಯೂ ಇದೆ,ಅಷ್ಟೇ ಅಗಾಧವಾದ ಶ್ರದ್ಧೆಯೂ ಇದೆ.

ಕೋಣದ ಯಜಮಾನ ತನ್ನ ಮನೆಯ ಕೋಣಗಳನ್ನು ಬರೀ ಕೋಣ ಇಲ್ಲವೇ ಅದೊಂದು ಸಾಮಾನ್ಯ ಪ್ರಾಣಿ ಎಂದು ಎಂದಿಗೂ ತಿಳಿದವನೇ ಅಲ್ಲ.ತನ್ನ ಮನೆಯ ಮಗನಿಗಿಂತಲೂ ಬಹಳ ಚೆನ್ನಾಗಿಯೇ ಅವುಗಳನ್ನು ಅವನು ನೋಡಿಕೊಳ್ಳುತ್ತಾನೆ.ಯಾವುದಕ್ಕೂ ಆತ ಕಡಿಮೆ ಮಾಡುವುದೇ ಇಲ್ಲ.ಅವನಿಗೆ ಅವನ ಮನೆಯ ಮಕ್ಕಳು ಬೇರೆಯಲ್ಲ,ಈ ಕಂಬಳದ ಕೋಣಗಳು ಬೇರೆಯಲ್ಲ.ಅವನಿಗೆ ಅದೊಂದು ಅಪರಿಮಿತವಾದ ಹೆಮ್ಮೆ.ಕೋಣಗಳ ಕಡೆಗೊಂದು ಅವನದ್ದೊಂದು ಈ ಪ್ರೀತಿ,ವಿಶ್ವಾಸ ಎಂದಿಗೂ ಕಡಿಮೆ ಆಗುವುದೇ ಇಲ್ಲ;ಸೋತರೂ ಅಷ್ಟೇ,ಗೆದ್ದರೂ ಅಷ್ಟೇ. 

ಅರಸು ಮಕ್ಕಳಂತೆ ಬೆಳೆಸಿದ ತನ್ನ ಮುದ್ದಿನ ಕೋಣವನ್ನು ಕಂಬಳದ ದಿನ ಕೇವಲ ಒಂದಿಷ್ಟು ಹೊತ್ತು ಅವನು ಅವಶ್ಯವಾಗಿ ದಂಡಿಸುತ್ತಾನೆ.ಆದರದು ಮಾರಣಾಂತಿಕ ಹಿಂಸೆ,ಪ್ರಾಣ ತೆಗೆಯುವಂತಹದ್ದು,ಇನ್ನಿಲ್ಲದಂತೆ ರಕ್ತ ಹರಿಸುವಂತಹದ್ದು ಎಂದು ನಮ್ಮಲ್ಲಿ ಯಾರಿಗೂ ಇಂದಿಗೂ ಅನಿಸಿಯೇ ಇಲ್ಲ,ಮುಂದೆಯೂ ಅನಿಸುವುದಿಲ್ಲ ಏಕೆಂದರೆ ಇಂತಹ ಸಾಧ್ಯತೆಯೇ ಕಂಬಳದಲ್ಲಿ ನಿಜವಾಗಿಯೂ ಇಲ್ಲ.

ಕಂಬಳದ ಕೋಣಗಳಿಗೆ ಈಜಾಡಲೆಂದೇ ಸ್ವಿಮ್ಮಿಂಗ್ ಫೂಲ್ ಕಟ್ಟಿಸಿದವರು ನಮ್ಮಲ್ಲಿ ಇದ್ದಾರೆ.ಕಂಬಳದ ಹಟ್ಟಿಗೆ ತಣ್ಣನೆಯ ಎ.ಸಿ ಯನ್ನು ಅಳವಡಿಸಿದವರು ಕೂಡ ನಮ್ಮಲ್ಲಿಯೇ ಇದ್ದಾರೆ.ತಮ್ಮ ಕೋಣ ಗೆದ್ದಾಗ ಊರಿಡೀ ಮೆರವಣಿಗೆ ಮಾಡಿ ಸಂಭ್ರಮಿಸಿದವರು,ಅದು ಕೊನೆಗೊಂದು ದಿನ ಸತ್ತು ಮಣ್ಣದಾಗ ಎದೆ ಹೊಡೆದು ಕೊಂಡು ಅತ್ತವರು,ಅದಕ್ಕೆ ಊರವರು ಸಹ ಇನ್ನಿಲ್ಲದಂತೆ ಮೌನವಾಗಿ ಕಣ್ಣೀರು ಸುರಿಸಿದ್ದನ್ನು ಕೂಡ ನಾವೆಲ್ಲರೂ ಅದೆಷ್ಟೋ ಸಲ ನೋಡಿದ್ದೇವೆ,ಕೇಳಿದ್ದೇವೆ. 

ನಿಜ ಹೇಳಬೇಕೆಂದರೆ ತುಳುನಾಡಿನಲ್ಲಿ ಕಂಬಳದ ಕೋಣಗಳನ್ನು ಸಾಕುವುದು ಎಂದರೆ ಅದು ಯಾವುದೇ ತೀರಿಯಲ್ಲಿ ಆನೆ ಸಾಕುವುದಕ್ಕಿಂತ ಕಡಿಮೆಯಾದ ವಿಷಯ ಅಲ್ಲವೇ ಅಲ್ಲ;ಆರ್ಥಿಕವಾಗಿಯೂ ಹೌದು ಮಾನಸಿಕವಾಗಿಯೂ ಹೌದು.ಸೋಲು ಗೆಲುವು ಎರಡನ್ನೂ ಹೊರತು ಕಂಬಳ ಎನ್ನುವುದು ನಮ್ಮಲ್ಲಿ ಅದೊಂದು ಗೌರವ ಹಾಗೂ ಪ್ರತಿಷ್ಠೆಯ ವಿಷಯ.ಕಂಬಳದ ಕೋಣಗಳು ಮನೆಯಲ್ಲಿ ಇದೆ ಎಂದರೆ ಆತನಿಗೊಂದು ಸಮಾಜದಲ್ಲಿ ವಿಶೇಷ ಮಾರ್ಯಾದೆ ಕೂಡ ಉಂಟು.ಕಂಬಳದ ಕೋಣ ಓಡಿಸುವವನಂತು ಅವರವರ ಊರಿನ ಉಸೇನ್ ಬೋಲ್ಟ್ ಎಂಬ ಖ್ಯಾತಿಗೆನೇ ಪಾತ್ರನಾಗುತ್ತಾನೆ. 

ನಿಜ ಹೇಳಬೇಕೆಂದರೆ ಈ ಪ್ರಾಣಿ ದಯಾ ಸಂಘದ ದ್ವಂದ್ವ ನೀತಿಗಳೇ ಕಂಬಳ ಪ್ರೇಮಿಗಳಲ್ಲಿ ಆ ಸಂಘದ ಮೇಲೆ ಇನ್ನಷು ಆಕ್ರೋಶ ಬರಲು ಕಾರಣವಾಗಿದ್ದು.ಕೇವಲ ಕಂಬಳದಲ್ಲಿ ಮಾತ್ರ ಪ್ರಾಣಿ ಹಿಂಸೆ ಇರುವುದೆಂದು ಇನ್ನಿಲ್ಲದಂತೆ ಮೂಗು ತೂರಿಸುವ ಈ ಒಂದು ಸಂಘಕ್ಕೆ ಬೇರೆ ಎಲ್ಲಿಯೂ ಪ್ರಾಣಿ ಹಿಂಸೆ ನಡೆಯುವುದು ಕಾಣುವುದೇ ಇಲ್ಲವೇ..? ಎಂದು ಸಾಮಾನ್ಯನು ಕೂಡ ಇಲ್ಲಿ ಆಕ್ರೋಶದಿಂದ ಪ್ರಶ್ನೆ ಎಸೆಯುತ್ತಾನೆ.ಖಂಡಿತವಾಗಿಯೂ ಈ ಪ್ರಶ್ನೆ ಅರ್ಹವಾದದ್ದೇ.ಎಲ್ಲವನ್ನೂ ಒಂದೇ ದುರ್ಬೀನು ಬಳಸಿ ನೋಡುವ ಧೈರ್ಯ ಈ ಸಂಘಗಳಿಗೂ ಎಂದಿಗೂ ಬಂದೇ ಇಲ್ಲ! ಮುಂದೆ ಬರುವುದು ಕೂಡ ಡೌಟೇ ಬಿಡಿ!!

ಅಂದ ಹಾಗೆ ಪ್ರಾಣಿ ದಯಾ ಸಂಘದ ಉಪಟಳ ಈಗ ಕಡಿಮೆ ಆಗಿದೆ,ಈಗ ಅವರುಗಳು ಅಷ್ಟಾಗಿ ಕಾಟ ಕೊಡುತ್ತಿಲ್ಲ,ಕಾಡುತ್ತಿಲ್ಲ,ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ನೋಡುವ ನಮಗೆ ಸಹಜವಾಗಿ ಕಂಬಳದ ಕರೆಯ ಸಮೀಪ ನಿಂತಾಗ ಅನಿಸಿದರೂ ಸಹ,ಕೋಣದ ಮಾಲಿಕನಿಗೆ,ಕೋಣ ಓಡಿಸುವವನಿಗೆ ಹಾಗೂ ಕಂಬಳದ ಆಯೋಜಕರಿಗೆ,ಈ ಪ್ರಾಣಿ ದಯಾ ಸಂಘದ ಸದಸ್ಯರು ಕಂಬಳದ ಜನರ ನಡುವೆಯೇ ಅಲ್ಲಲ್ಲಿ ಇನ್ನೂ ಇದ್ದಾರೆ ಎಂಬ ಅನುಮಾನವೊಂದು ಈಗಲೂ ಬಲವಾಗಿ ಕಾಡುತ್ತಲೇ ಇದೆ.

ಅದೆಲ್ಲಾ ಏನೇ ಇದ್ದರೂ ಇವುಗಳೆಲ್ಲದರ ನಡುವೆ ಕಂಬಳ ಮಾತ್ರ ಬಹಳ ಗತ್ತಿನಿಂದ,ಗಾಂಭೀರ್ಯದಿಂದ ಮತ್ತಷ್ಟು ಸಂಭ್ರಮದಿಂದ ಎಂದಿನಂತೆ ನಡೆಯುತ್ತಲೇ ಇದೆ.ಗೆದ್ದವರಿಗೆ ಬಂಗಾರದ ಪವನ್ ಗಳನ್ನು ಅದು ಕೊಂಬು ಕಹಳೆಗಳ ಅಬ್ಬರದ ನಡುವೆ ನಿರಂತರವಾಗಿ ಗೌರವಪೂರ್ವಕವಾಗಿ ವಿತರಿಸುತ್ತಲೇ ಇದೆ.ಬಹುಶಃ ತುಳುನಾಡಿನ ಈ ಕ್ರೀಡೆ ಮುಂದೆಯೂ ಹೀಗೆಯೇ ನಿರಂತರವಾಗಿ ನಡೆಯಲಿದೆ ಎಂಬ ಆಶಯ ಎಲ್ಲಾ ಕಂಬಳ ಪ್ರೇಮಿಗಳದ್ದು.ಹೌದು ಕಂಬಳ ಬರೀ ಕ್ರೀಡೆಯಲ್ಲ,ಅದೊಂದು ದಿವ್ಯವಾದ ಸಂಸ್ಕೃತಿಯ ಪ್ರತೀಕ...


Leave a Comment