ಮೈಸೂರು: ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೆ ಮೆರವಣಿಗೆ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ, ಕಲ್ಲು ತೂರಾಟ ನಡೆದಿರುವ ವರದಿಯಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಕಾರ್ಯ ಗ್ರಾಮದ ಆನಂದ್, ಭರತ್, ಅಭಿ ಸೇರಿದಂತೆ ಮಗುವಿಗೂ ಗಾಯಗಳಾಗಿದ್ದು, ಅವರಿಗೆ ತಗಡೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಬೆಟ್ಟದ ಮೇಲಿಂದ ಬಂದ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಅರ್ಧಕ್ಕೆ ಸ್ಥಗಿತಗೊಂಡಿದೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ನಂಜನಗೂಡು ತಹಶೀಲ್ದಾರ್ ಆಗಮಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ
ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಪಟಾಕಿ ಹಚ್ಚುವ ವಿಚಾರವಾಗಿ ಗಲಾಟೆಯಾಗಿತ್ತು. ಈಗ ವಾತಾವರಣ ಎಂದಿನಂತೆ ಇದೆ. ಘಟನೆಯಿಂದ ಗಾಯಗೊಂಡವರು ಚಿಕಿತ್ಸೆ ಪಡೆದು ನಿನ್ನೆ ರಾತ್ರಿಯೇ ಮನೆಗೆ ತೆರಳಿದ್ದಾರೆ. ಗ್ರಾಮಸ್ಥರಿಗೂ ಮತ್ತೆ ಗಲಾಟೆ ಮುಂದುವರೆಸದಂತೆ ತಿಳಿ ಹೇಳಲಾಗಿದೆ ಎಂದು ಕವಲಂದೆ ಠಾಣೆ ಇನ್ಸ್ಸ್ಪೆಕ್ಟರ್ ಬಸವರಾಜು ಮಾಹಿತಿ ನೀಡಿದ್ದಾರೆ.









