'ಪ್ರಜ್ವಲ್ ರೇವಣ್ಣ ಪ್ರಕರಣದ ಎ2 ಕಾರ್ತಿಕ್‌ಗೂ ಡಿಕೆಶಿಗೂ ಲಿಂಕ್‌': ಹೆಚ್‌ಡಿಕೆ ಗಂಭೀರ ಆರೋಪ, ಸಿಡಿಆರ್ ದಾಖಲೆ ಬಿಡುಗಡೆ

Coastal Bulletin
'ಪ್ರಜ್ವಲ್ ರೇವಣ್ಣ ಪ್ರಕರಣದ ಎ2 ಕಾರ್ತಿಕ್‌ಗೂ ಡಿಕೆಶಿಗೂ ಲಿಂಕ್‌': ಹೆಚ್‌ಡಿಕೆ ಗಂಭೀರ ಆರೋಪ, ಸಿಡಿಆರ್ ದಾಖಲೆ ಬಿಡುಗಡೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ ಎ2 ಆರೋಪಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್, ವಿಡಿಯೋ ಹಂಚಿಕೆ ಮಾಡುವ ಮುನ್ನ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದ ಎಂಬ ಆರೋಪದೊಂದಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿದ ಅವರು, 2023ರ ಆಗಸ್ಟ್ 5 ಮತ್ತು 6ರಂದು ಕಾರ್ತಿಕ್, ಆಗ ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿರುವ ಮಾಹಿತಿ ಸಿಡಿಆರ್‌ನಲ್ಲಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ತಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆ. ಕಾರ್ತಿಕ್ ಮತ್ತು ಡಿಕೆಶಿ ನಡುವಿನ ಸಂಪರ್ಕದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿರುವ ಅವರು, ಸ್ಟಿಂಗ್ ಪ್ರಕರಣದಲ್ಲಿ ತಮ್ಮ ಮನೆಗೆ ಆರೋಪಿಗಳ ಸಂಪರ್ಕವಿದೆ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು ಪ್ರಜ್ವಲ್ ಪ್ರಕರಣದಲ್ಲಿ ಕಾರ್ತಿಕ್ ಅವರು ಆಗ ಡಿಸಿಎಂ ಆಗಿದ್ದ ಡಿಕೆಶಿ ಮನೆಗೆ ಭೇಟಿ ನೀಡಿರುವುದಕ್ಕೆ ಉತ್ತರಿಸಬೇಕು ಎಂದು ಸವಾಲು ಹಾಕಿದ್ದಾರೆ.

ಸ್ಟಿಂಗ್ ತನಿಖೆ- ಪೊಲೀಸ್ ಕಮಿಷನರ್ ಹೇಳಿಕೆಗೆ ಕುಮಾರಸ್ವಾಮಿ ಆಕ್ಷೇಪ: ಸ್ಟಿಂಗ್ ಆಪರೇಷನ್ ಮೂಲಕ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ. ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡುವ ಉದ್ದೇಶದಿಂದ ತನಿಖೆ ನಡೆಯುತ್ತಿದೆ. ಸಿಸಿಬಿ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಸತೀಶ್ ಅವರನ್ನು ಬದಲಾವಣೆ ಮಾಡಿದ್ದೇಕೆ?, ಪೊಲೀಸ್ ಕಮಿಷನರ್ ತರಾತುರಿಯಲ್ಲಿ ಹೇಳಿಕೆ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಪ್ರಕರಣದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನೂ ಉಲ್ಲಂಘಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು. ಸ್ಟಿಂಗ್ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರುವ ಮುನ್ನವೇ ಪೊಲೀಸರು ಅದನ್ನು ಕಟ್ಟುಕಥೆ ಹಾಗೂ ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಪ್ರಕರಣ ಎಂದು ಹೇಳಿರುವುದು ಸರಿಯಲ್ಲ ಎಂದರು.

ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ಎಲ್ಲಿಗೆ ಕಳುಹಿಸಲಾಗಿದೆ?, ಆಕೆಯನ್ನು ವಿಚಾರಣೆ ನಡೆಸಿ ಯಾವ ಹೇಳಿಕೆ ಪಡೆಯಲಾಗಿದೆ?, ಚಿತ್ರೀಕರಣ ಪೂರ್ವಯೋಜಿತವಾಗಿತ್ತೇ?, ಇದರ ಹಿಂದೆ ಯಾರಿದ್ದಾರೆ? ಎಂಬುದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಹೆಚ್ಡಿಕೆ ಆಗ್ರಹಿಸಿದರು.

'ನನಗೆ ರಿತೇಶ್ ಪಾಂಡೆಯ ಪರಿಚಯವಿಲ್ಲ': ಸ್ಟಿಂಗ್ ಪ್ರಕರಣದ ಆರೋಪಿ ರಿತೇಶ್ ಪಾಂಡೆ ಯಾರೆಂಬುದೇ ನನಗೆ ಗೊತ್ತಿಲ್ಲ. ಆತನ ಮುಖವನ್ನೂ ನೋಡಿಲ್ಲ. ದೆಹಲಿಯ ನನ್ನ ಮನೆಗೆ ನೂರಾರು ಜನರು ಬಂದು ಹೋಗುತ್ತಾರೆ. ಆತ ಬಂದಿದ್ದರೆ ಅದರ ಬಗ್ಗೆ ತನಿಖೆ ನಡೆಸಲಿ ಎಂದು ತಿಳಿಸಿದರು. ರಿತೇಶ್ ಪಾಂಡೆ ನನ್ನ ಮನೆಯಲ್ಲಿದ್ದ ಎನ್ನಲಾಗುತ್ತಿದ್ದರೂ, ಪೊಲೀಸರು ನೀಡಿರುವ ವಿಳಾಸ ಉತ್ತರ ಪ್ರದೇಶದ ಇಂದಿರಾಪುರ, ಘಾಜಿಯಾಬಾದ್ ಆಗಿದೆ. ನಿತೀಶ್ ಕುಮಾರ್ ಎಂಬಾತನನ್ನು ಪೊಲೀಸರು ದೆಹಲಿಯಿಂದ ಕರೆತಂದಿರುವುದಾಗಿ ಹೇಳಲಾಗಿದ್ದು,

ಆತನನ್ನು ಎಲ್ಲಿ ಬಂಧಿಸಲಾಯಿತು ಮತ್ತು ಯಾವ ವಿಳಾಸದ ಆಧಾರದಲ್ಲಿ ಬಂಧಿಸಲಾಯಿತು ಎಂಬುದಕ್ಕೂ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

2011ರ ಘಟನೆ, 2023ರಲ್ಲಿ ಚಿತ್ರೀಕರಣವೇಕೆ?': ಪ್ರಿಯಾಂಕ್ ಖರ್ಗೆ ಅವರ ಟ್ರೇಲರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಇದು 2011ರಲ್ಲಿ ನಡೆದ ಘಟನೆ. ಆದರೆ, 2023ರಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. 12 ವರ್ಷಗಳ ಬಳಿಕ ಈ ವಿಚಾರ ಮುನ್ನೆಲೆಗೆ ಬಂದಿರುವುದೇಕೆ ಎಂದೂ ಪ್ರಶ್ನಿಸಿದರು. 2011ರ ಘಟನೆಗೂ ನನಗೂ ಸಂಬಂಧವಿಲ್ಲ, ಚಿತ್ರೀಕರಣಕ್ಕೂ ನಾನು ಕಾರಣ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

2015ರಲ್ಲಿ ಮಹಿಳೆಯೊಬ್ಬರು ಕೃಪಾ ಆಳ್ವ ಅವರಿಗೆ ಇಮೇಲ್ ಮಾಡಿದ್ದರು ಎಂಬ ಮಾಹಿತಿ ಇದೆ. ಆ ಇಮೇಲ್ ದಾಖಲೆ ಎಲ್ಲಿದೆ?, ಮಹಿಳೆಯನ್ನು ಚಿತ್ರೀಕರಣದ ಸ್ಥಳಕ್ಕೆ ಕರೆತಂದಿದ್ದ ವಯಸ್ಸಾದ ವ್ಯಕ್ತಿ ಯಾರು?, ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆಯೇ?, ಕೃಪಾ ಆಳ್ವ ಮತ್ತು ಆ ಮಹಿಳೆಯ ನಡುವಿನ ಸಂಬಂಧವೇನುೂ ಎಂಬ ಪ್ರಶ್ನೆಗಳನ್ನು ಕುಮಾರಸ್ವಾಮಿ ಎತ್ತಿದ್ದಾರೆ.

ಡಿಕೆಶಿ ವಿರುದ್ಧ ಹಳೆಯ ವಿಡಿಯೋ ಪ್ರದರ್ಶನ: ಡಿ.ಕೆ.ಶಿವಕುಮಾರ್ ಅವರು ಸಿಡಿ ಹಾಗೂ ಬ್ಲ್ಯಾಕ್‌ಮೇಲ್ ರಾಜಕಾರಣದ ಮೂಲಕ ರಾಜಕೀಯ ಸ್ಥಾನಕ್ಕೇರಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಈ ಹಿಂದೆ ವಿಧಾನಸಭೆಯಲ್ಲಿ ಸಿಡಿ ಗ್ಯಾಂಗ್ ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ಡಿಕೆಶಿ ಮಾತನಾಡಿದ್ದ ವಿಡಿಯೋ ತುಣುಕನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ರಮೇಶ್ ಜಾರಕಿಹೊಳಿ ಪ್ರಕರಣ ಸೇರಿದಂತೆ ಹಿಂದಿನ ಬ್ಲ್ಯಾಕ್‌ಮೇಲ್ ಆರೋಪಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರನ್ನೂ ಸಿಡಿ ತೋರಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ ಎಂಬ ಮಾತು ಕಾಂಗ್ರೆಸ್‌ನಲ್ಲೇ ಇದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಗಮನಹರಿಸಬೇಕು ಎಂದರು.

'ನನ್ನ ಮನೆಗೆ ಶೋಧ ನಡೆಸಿದರೂ ಸ್ವಾಗತ': ನನ್ನ ವಿರುದ್ಧ ಹಲವು ಪ್ರಕರಣಗಳಿದ್ದರೂ ಯಾರ ಬಳಿಯೂ ರಾಜಕೀಯ ರಕ್ಷಣೆ ಕೇಳಿಲ್ಲ. ಕಾನೂನುಬದ್ಧ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ನನ್ನ ಮನೆಗೆ ಸರ್ಚ್ ವಾರಂಟ್ ತಂದು ಶೋಧ ನಡೆಸಿದರೂ ಸ್ವಾಗತ ಎಂದು ಹೇಳಿದರು. ಸ್ಟಿಂಗ್ ಪ್ರಕರಣದಲ್ಲಿ ತಮ್ಮ ವಿರುದ್ಧವೂ ಕ್ರಮ ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ಪ್ರಿಯಾಂಕ್ ಖರ್ಗೆ, ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನನ್ನ ಹೋರಾಟ ಯಾರ ವೈಯಕ್ತಿಕ ತೇಜೋವಧೆಗಲ್ಲ. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನಡೆಯುತ್ತಿರುವ ಬ್ಲ್ಯಾಕ್‌ಮೇಲ್ ಜಾಲದ ವಿರುದ್ಧವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ತನಿಖಾಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Leave a Comment