ಬಂಟ್ವಾಳದಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹743 ಕೋಟಿ ವೆಚ್ಚ: ಯು.ಟಿ. ಖಾದರ್

Coastal Bulletin
ಬಂಟ್ವಾಳದಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹743 ಕೋಟಿ ವೆಚ್ಚ: ಯು.ಟಿ. ಖಾದರ್

ಬಂಟ್ವಾಳ: ರಾಜ್ಯದ ಬಡಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇತರ ರಾಜ್ಯಗಳಿಗೂ ಮಾದರಿಯಾಗಿವೆ. ಬಂಟ್ವಾಳ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ₹743 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ₹428 ಕೋಟಿ ಗೃಹಲಕ್ಷ್ಮೀ ಯೋಜನೆಗೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ತೊಂದರೆಯಾಗಿಲ್ಲ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಮೇರಮಜಲು, ಕೊಡ್ಮಾಣ್, ಪುದು ಹಾಗೂ ತುಂಬೆ ಗ್ರಾಮಗಳ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಕೊಡ್ಮಾಣ್‌ ಶಾಲಾ ವಠಾರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಜನರ ಒಗ್ಗಟ್ಟು ಅಗತ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಸ್ಥಾನಕ್ಕೇರಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವುದು ಐತಿಹಾಸಿಕ ಕ್ರಮವಾಗಿದೆ ಎಂದರು. ಈ ಸಂದರ್ಭದಲ್ಲಿ ಕೊಡ್ಮಾಣ್ ಮತ್ತು ಮೇರಮಜಲು ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದ ಕೀರ್ತಿಶೇಷ ಕೊಡ್ಮಾಣ್  ಕಾಂತಪ್ಪ ಶೆಟ್ಟಿ ಅವರನ್ನು ಸ್ಮರಿಸಿದರು.

ಕರ್ನಾಟಕ ಗೇರು ಅಭಿವೃದಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಮನೆ ಮತ್ತು ಮನಸ್ಸುಗಳನ್ನು ಬೆಳಗಿಸಲು. ಪ್ರೀತಿಯಿಂದ ಸಮಾಜ ನಿರ್ಮಾಣ ಮಾಡುವ ಕೆಲಸ ಆಗಬೇಕಿದೆ. ತಾಯಿಯ ಹೊಟ್ಟೆಯಿಂದ ಬರುವಾಗ ಉಸಿರು ಇರುತ್ತದೆ, ಅಳಿದು ಹೋಗುವಾಗ ಹೆಸರು ಇರುತ್ತದೆ. ಒಳ್ಳೆಯ ಕೆಲಸಗಳಿಂದ ಹೆಸರು ಉಳಿಸಿ ಹೋಗುವ ಕೆಲಸ ಮಾಡೋಣ

ಎಂದು ಹೇಳಿದರು.

ಸಚಿವ ಯು.ಟಿ ಖಾದರ್‌, ಮಮತಾ ಗಟ್ಟಿ, ಜಯಂತಿ ಪೂಜಾರಿ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಕೆಲಸ ಮಾಡಿದ ಬಿಎಲ್‌ಒಗಳನ್ನು ಸನ್ಮಾನಿಸಲಾಯಿತು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷರಾದ ಜಯಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮೇರಮಜಲು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ, ಮುಡಿಪು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವೃಂದಾ ಪೂಜಾರಿ, ದ.ಕ. ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ಉಪಾಧ್ಯಕ್ಷರಾದ ನಾರಾಯಣ್‌ ನಾಯಕ್‌, ಪುದು ಗ್ರಾಮ ಪಂಚಾಯತ್‌ ಅಧ್ಯಕ್ಷ ರಮ್ಲಾನ್‌ ಮಾರಿಪಳ್ಳ, ಪ್ರಮುಖರಾದ ಅನಿಲ್‌ ಕುಮಾರ್‌ ಅಬ್ಬೆಟ್ಟು, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ್‌ ಆಚಾರ್ಯ, ಸತೀಶ್‌ ಕುಮಾರ್‌, ಕರೀಂ ಬೊಳ್ಳಾಯಿ, ಮಜೀದ್‌ ಕನ್ಯಾನ, ದಿನೇಶ್‌ ಪೂಜಾರಿ, ಸುರೇಶ್‌ ಭಟ್ನಗರ, ಗಣೇಶ್‌ ಸಾಲ್ಯಾನ್‌, ಗಂಗಾಧರ ಗೌಡ, ರಫೀಕ್‌ ಉಳ್ಳಾಲ, ಅಮಿತಾ ಅಶ್ವಿನಿ ಉಳ್ಳಾಲ, ಜಯಲಕ್ಷ್ಮೀ, ಯೋಗೀಶ್‌ ಪ್ರಭು, ಶಾಂತಿ ನೋಬರ್ಟ್‌ ಫಾರೂಕ್‌ ಫರಂಗಿಪೇಟೆ ಮೊದಲಾದವರು ಹಾಜರಿದ್ದರು.

ಬಂಟ್ವಾಳ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್‌ ಕುಮಾರ್‌ ಸ್ವಾಗತಿಸಿದರು. ಇರ್ಫಾನ್‌ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Comment