ಫರ್ಲಾ: ನ.4ರಂದು  ಸೈಂಟ್ ಜೇಕಬ್ ಶಾಲೆಯ ಶತಮಾನೋತ್ಸವ ಸಂಭ್ರಮ ಸಮಾರಂಭ.

Coastal Bulletin
ಫರ್ಲಾ: ನ.4ರಂದು  ಸೈಂಟ್ ಜೇಕಬ್ ಶಾಲೆಯ ಶತಮಾನೋತ್ಸವ ಸಂಭ್ರಮ ಸಮಾರಂಭ.

ಬಂಟ್ವಾಳ: ತಾಲೂಕಿನ ಫರ್ಲಾದಲ್ಲಿರುವ ಸೈಂಟ್ ಜೇಕಬ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಸಮಾರಂಭವು ನ. 4ರಂದು ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಈ ಕುರಿತು ಶಾಲಾ ಸಂಚಾಲಕ ವಂ.ಫಾ. ಮಾರ್ಕ್ ಅರುಣ್ ಡಿಸೋಜ ಅವರು ಶನಿವಾರ ಬಿ ಸಿ ರೋಡ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ.4ರಂದು ಬೆಳಗ್ಗೆ ಬಂಟ್ವಾಳ ವಲಯ ಪ್ರಧಾನ ಗುರುಗಳಾದ ವಂ.ಫಾ. ವಿಕ್ಟರ್ ಡಿಸೋಜ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಸುದರ್ಶನ ಬಲ್ಲಾಳ್ ಹಾಗೂ ನಾವೂರು ಅಗ್ರಹಾರದ ಆಲ್ ಅಮೀನ್ ಅಜು ಅಕಾಡೆಮಿಯ ಉಸ್ತಾದ್ ಎಂ.ಎ. ಸಖಾಫಿ ಅಬ್ದುಲ್ ಖಾದರ್ ಸೇರಿದಂತೆ ವಿವಿಧ ಧರ್ಮಗಳ ಗಣ್ಯರು ಭಾಗವಹಿಸಲಿದ್ದಾರೆ.

ಅಪರಾಹ್ನ 2.15ಕ್ಕೆ ನಡೆಯುವ ಶತಮಾನೋತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಪೀಟರ್ ಪಾವ್ ಡಿಸೋಜ ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಅಲೋಶಿಯಸ್ ಪಾವ್ ಡಿಸೋಜ, ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ವಂ.ಫಾ. ಮ್ಯಾಕ್ಸಿಂ ನೊರೊನ್ಹ, ಸಿಬಿಇ ಕಾರ್ಯದರ್ಶಿ ವಂ.ಫಾ. ಪ್ರವೀಣ್ ಲಿಯೋ ಲಸ್ರಾದೊ, ಪ್ರಾಂತ್ಯಾಧಿಕಾರಿ ವಂ.ಫಾ. ಮೈಕಲ್ ಆಲ್ವೇಡ, ಕರ್ನಾಟಕ ರೀಜನಲ್ ಕಮಿಷನ್ ಫಾರ್ ಎಜುಕೇಶನ್

ಆಡಳಿತ ಮಂಡಳಿ ಸದಸ್ಯ ವಂ.ಫಾ. ಗಿಲ್ಬರ್ಟ್ ಮಸ್ಕರೇನಸ್ ಹಾಗೂ ಶಾಲಾ ಸಂಚಾಲಕ ವಂ.ಫಾ. ಮಾರ್ಕ್ ಅರುಣ್ ಡಿಸೋಜ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ., ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಕ್ಯಾಸ್ಟಲಿನೊ, ಕಾರ್ಯದರ್ಶಿ ಸುನಿತಾ ಬ್ಯಾಪ್ಟಿಸ್ಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೇಶವ ಹಾಗೂ ಮುಖ್ಯ ಶಿಕ್ಷಕ ವೈ.ಎಫ್. ಕಾಲವಾಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಹಾದಾನಿಗಳಾದ ಪ್ರಭಾಕರ ದಂಪತಿ, ಬರ್ನಾರ್ಡ್ ಸಲ್ದಾನ ಮತ್ತು ಜಸಿಂತ ಟಿ. ಡಿಸೋಜ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ದಾನಿಗಳ ಹಾಗೂ ಸ್ಥಳೀಯರ ನಿರಂತರ ಪ್ರೋತ್ಸಾಹ ಮತ್ತು ಸಹಕಾರದಿಂದ ಶಾಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ. ಶತಮಾನೋತ್ಸವದ ಅಂಗವಾಗಿ ಶಾಲೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಮಹಾದಾನಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯ ಶಿಕ್ಷಕ ವೈ.ಎಫ್. ಕಾಲವಾಡ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಕ್ಯಾಸ್ಟಲಿನೊ, ನಿವೃತ್ತ ಮುಖ್ಯ ಶಿಕ್ಷಕಿ ಜಸಿಂತ ಟಿ. ಡಿಸೋಜ ಉಪಸ್ಥಿತರಿದ್ದರು.

Leave a Comment