ಎಸ್‌ಐಆರ್ ರದ್ದುಗೊಳಿಸಬೇಕು: ಎಐಟಿಯುಸಿ ಪ್ರತಿನಿಧಿ ಸಮಾವೇಶದಲ್ಲಿ ಒಕ್ಕೊರಲ ಆಗ್ರಹ.

Coastal Bulletin
ಎಸ್‌ಐಆರ್ ರದ್ದುಗೊಳಿಸಬೇಕು: ಎಐಟಿಯುಸಿ ಪ್ರತಿನಿಧಿ ಸಮಾವೇಶದಲ್ಲಿ ಒಕ್ಕೊರಲ ಆಗ್ರಹ.

ಬಂಟ್ವಾಳ: ಎಸ್‌ಐಆರ್ (ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಹೆಸರಿನಲ್ಲಿ ದುಡಿಯುವ ವರ್ಗ ಸೇರಿದಂತೆ ದೇಶದ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮತದಾನವು ಸಂವಿಧಾನ ನೀಡಿರುವ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಅದನ್ನು ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ. ಎಸ್‌ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿ ದುಡಿಯುವ ವರ್ಗದವರು ಒಗ್ಗಟ್ಟಿನಿಂದ ಬೃಹತ್ ಜನಾಂದೋಲನ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದು ಎಐಟಿಯುಸಿ ಪ್ರತಿನಿಧಿ ಸಮಾವೇಶದಲ್ಲಿ ಒಕ್ಕೊರಲ ಆಗ್ರಹ ವ್ಯಕ್ತವಾಯಿತು.

ಇತ್ತೀಚೆಗೆ ಬಿಸಿರೋಡಿನ ಸಿಪಿಐ ಸಭಾಭವನದಲ್ಲಿ ನಡೆದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 17ನೇ ಸಮ್ಮೇಳನದ ಪ್ರತಿನಿಧಿ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಮಾವೇಶವನ್ನು ಉದ್ಘಾಟಿಸಿದ ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಎ. ಪ್ರಭಾಕರ ರಾವ್ ಮಾತನಾಡಿ, ಕಾರ್ಮಿಕ ವರ್ಗದ ಐತಿಹಾಸಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.

ಸಮಾವೇಶದ ಅಧ್ಯಕ್ಷೀಯ ಮಂಡಳಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ವಿ. ರಾವ್, ಜಿಲ್ಲಾ ನಾಯಕರುಗಳಾದ ಕುಸುಮ ವಿಶ್ವನಾಥ್ ಮತ್ತು ಹರ್ಷಿತ್ ಸುವರ್ಣ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಹಾಗೂ ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್ ಉಪಸ್ಥಿತರಿದ್ದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ವಿ.ಎಸ್. ಬೆರಿಂಜ ಅವರು ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ವರದಿಯ ಕುರಿತು ಸಂಘಟನಾತ್ಮಕ ಚರ್ಚೆ ನಡೆದು, ಅನುಮೋದನೆ ನೀಡಲಾಯಿತು. ಸಮ್ಮೇಳನದಲ್ಲಿ ಮಂಡಿಸಲಾದ ನಿರ್ಣಯಗಳನ್ನು ನಿರ್ಣಯ ಸಮಿತಿಯ ಪರವಾಗಿ ಸಂಚಾಲಕರಾದ ಕರುಣಾಕರ ಮಾರಿಪಳ್ಳ ಮತ್ತು ಶಮಿತ್ ಸುರೇಶ್ ಮಂಡಿಸಿದರು.

ನವೆಂಬರ್ 22ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಎಐಟಿಯುಸಿಯ 43ನೇ ರಾಷ್ಟ್ರೀಯ ಮಹಾ ಅಧಿವೇಶನಕ್ಕೆ ಪ್ರತಿನಿಧಿಗಳ ಆಯ್ಕೆ ನಡೆಯಿತು. ನವೆಂಬರ್ 22ರಂದು ನಡೆಯಲಿರುವ ಬೃಹತ್ ರ‍್ಯಾಲಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 500 ಮಂದಿ ಭಾಗವಹಿಸಲು ನಿರ್ಧರಿಸಲಾಯಿತು.

ಮುಂದಿನ ಸಮ್ಮೇಳನದ ಅವಧಿಗೆ ಸುಮಾರು 35 ಸದಸ್ಯರನ್ನೊಳಗೊಂಡ ಎಐಟಿಯುಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಂಡಳಿಯನ್ನು ರಚಿಸಲಾಯಿತು.

ಆರಂಭದಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೆರಿಂಜ ವಂದಿಸಿದರು.

Leave a Comment