ಬಂಟ್ವಾಳ: ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಕಸ, ಕೆಸರು ಹಾಗೂ ಪಾಚಿ ತುಂಬಿಕೊಂಡು ಅಶುದ್ಧ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶುದ್ಧೀಕರಣ ಘಟಕದ ದುಃಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಜನರ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಅಗತ್ಯವಾಗಿದ್ದು, ಜನರಿಗೆ ಶುದ್ಧ ಹಾಗೂ ಸುರಕ್ಷಿತ ನೀರು ಒದಗಿಸುವುದು ಸಂಬಂಧಪಟ್ಟ ಇಲಾಖೆಯ ಮೊದಲ ಆದ್ಯತೆಯಾಗಬೇಕು ಎಂದರು.
ಘಟಕದ ಒಳಭಾಗದಲ್ಲಿ ಕಸ, ಕೆಸರು ಹಾಗೂ ಪಾಚಿ ಸಂಗ್ರಹವಾಗಿರುವುದರಿಂದ ನೀರಿನ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಇಂತಹ ನೀರನ್ನು ಕುಡಿಯುವ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಜನರಿಗೆ ರೋಗ ಹರಡುವ ಪರಿಸ್ಥಿತಿ ನಿರ್ಮಾಣವಾಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಪುರಸಭಾ ವ್ಯಾಪ್ತಿಯಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದರು. ಶುದ್ಧೀಕರಣ ಘಟಕದ ಸಂಪೂರ್ಣ ಸ್ವಚ್ಛತೆ ಹಾಗೂ ಅಗತ್ಯ ನಿರ್ವಹಣಾ ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿ, ಎರಡು ದಿನಗಳ ಗಡುವು ನೀಡುವಂತೆ ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿಯವರಿಗೂ ಕರೆ ಮಾಡಿ ಮಾತನಾಡಿದ ಅವರು, ಎರಡು ದಿನಗಳೊಳಗೆ ಘಟಕವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿ, ಶುದ್ಧೀಕರಣ ವ್ಯವಸ್ಥೆಯನ್ನು ಸುಸ್ಥಿತಿಗೆ ತರಬೇಕು. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ
ಎಂದು ಎಚ್ಚರಿಸಿದರು.
ಹಣದ ಕೊರತೆಯಿದ್ದರೆ ತಿಳಿಸಿ, ನಾನೇ ಸ್ವಚ್ಛತೆಗೆ ಇಳಿಯುತ್ತೇನೆ:
ಶುದ್ಧೀಕರಣ ಘಟಕವನ್ನು ಸ್ವಚ್ಛಗೊಳಿಸಲು ಪುರಸಭೆಯಲ್ಲಿ ಹಣದ ಕೊರತೆಯಿದ್ದರೆ ತಿಳಿಸಲಿ. ನಾನೇ ಸಾರ್ವಜನಿಕರೊಂದಿಗೆ ಸೇರಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತೇನೆ. ಅಧಿಕಾರಿಗಳು ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕರನ್ನು ಒಗ್ಗೂಡಿಸಿ ಅಧಿಕಾರಿಗಳ ಸಮ್ಮುಖದಲ್ಲೇ ನಾನೇ ಖುದ್ದಾಗಿ ಸ್ವಚ್ಛತಾ ಕಾರ್ಯ ನಡೆಸುತ್ತೇನೆ. ಜನರಿಗೆ ಕುಡಿಯಲು ಯೋಗ್ಯವಾದ ನೀರು ಸಿಗಬೇಕು ಎಂಬುದೇ ನನ್ನ ಉದ್ದೇಶ. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಖಡಕ್ ಎಚ್ಚರಿಕೆ ನೀಡಿದರು.
ಶುದ್ಧೀಕರಣ ಘಟಕದ ಸ್ವಚ್ಛತೆ ಕೇವಲ ಒಮ್ಮೆ ನಡೆಸುವ ಕಾರ್ಯವಾಗದೆ, ನಿಯಮಿತ ನಿರ್ವಹಣೆಗೆ ವ್ಯವಸ್ಥೆ ರೂಪಿಸಬೇಕು. ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಿ, ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಅಪಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯರಾದ ಎ. ಗೋವಿಂದ ಪ್ರಭು, ಗಂಗಾಧರ ಪೂಜಾರಿ, ವಿದ್ಯಾವತಿ ಪ್ರಮೋದ್, ರೇಖಾ ಪೈ, ಹರಿಪ್ರಸಾದ್, ಪ್ರಮುಖರಾದ ವಿಕಾಸ್ ಪುತ್ತೂರು, ಶಿವಪ್ರಸಾದ್ ಶೆಟ್ಟಿ, ರಾಮ್ದಾಸ್ ಬಂಟ್ವಾಳ, ಸುರೇಶ್ ಕುಲಾಲ್, ಜನಾರ್ದನ ಬೊಂಡಾಲ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ದಾಸ್, ಪ್ರಣಾಮ್ ಅಜ್ಜಿಬೆಟ್ಟು, ವಸಂತ ಭಂಡಾರಿ ಹಾಗೂ ನಗರ ಮಹಾಶಕ್ತಿ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.









