ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ನೀಡಿ, ಬೆಲೆ ಏರಿಕೆಯಿಂದ ಮತ್ತೊಂದು ಕೈಯಲ್ಲಿ ವಸೂಲಿ: ಎಸ್‌ಡಿಪಿಐ

Coastal Bulletin
ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ನೀಡಿ, ಬೆಲೆ ಏರಿಕೆಯಿಂದ ಮತ್ತೊಂದು ಕೈಯಲ್ಲಿ ವಸೂಲಿ: ಎಸ್‌ಡಿಪಿಐ

ಬಂಟ್ವಾಳ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಸೌಲಭ್ಯಗಳನ್ನು ಒದಗಿಸುತ್ತಿರುವ ಸರ್ಕಾರ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುತ್ತಿದೆ ಎಂದು ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಆರೋಪಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳವನ್ನು ಖಂಡಿಸಿ, ಬೆಲೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ರಾಜ್ಯಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ತನ್ನ ಪಕ್ಷದ ಖಜಾನೆಯಿಂದಾಗಲಿ ಅಥವಾ ಶಾಸಕರ ವೈಯಕ್ತಿಕ ಆದಾಯದಿಂದಾಗಲಿ ನೀಡುತ್ತಿಲ್ಲ. ಜನರು ಪಾವತಿಸುವ ತೆರಿಗೆ ಹಣದಿಂದಲೇ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜನರ ತೆರಿಗೆ ಹಣವನ್ನೇ ಸೌಲಭ್ಯಗಳ ರೂಪದಲ್ಲಿ ನೀಡಿ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಅದೇ ಜನರ ಜೇಬಿಗೆ ಹೊರೆ ಹಾಕುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಬೆಲೆ ಏರಿಕೆ, ದಿನನಿತ್ಯದ ಖರ್ಚು ಹಾಗೂ ಆರ್ಥಿಕ ಒತ್ತಡದಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆಯುತ್ತಿದೆ ಎಂಬ ಕಾರಣಕ್ಕೆ ಜನರ ಇತರ ಸಮಸ್ಯೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸರ್ಕಾರ ಗ್ಯಾರಂಟಿಗಳ ಪ್ರಚಾರಕ್ಕೆ ಸೀಮಿತವಾಗದೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೂ ಆದ್ಯತೆ ನೀಡಬೇಕು ಎಂದರು.

ಕ್ಷೇತ್ರಾಧ್ಯಕ್ಷ ಶಾಹುಲ್

ಹಮೀದ್ ಎಸ್.ಎಚ್. ಮಾತನಾಡಿ, ಜನರು ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದಾಗ ಬೇರೆ ರಾಜ್ಯಗಳ ಬೆಲೆ ಏರಿಕೆಯನ್ನು ಉದಾಹರಣೆಯಾಗಿ ನೀಡುವುದಾದರೆ, ಕರ್ನಾಟಕದ ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ? ಜನರು ಮತ ನೀಡಿ ಅಧಿಕಾರಕ್ಕೆ ತಂದಿರುವುದು ರಾಜ್ಯದ ಜನರ ಕಷ್ಟಗಳನ್ನು ನಿವಾರಿಸುವುದಕ್ಕಾಗಿ ಎಂದು ಟೀಕಿಸಿದರು.

ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ಅಡ್ವಕೇಟ್ ಕಬೀರ್ ಕೆಮ್ಮಾರ ಮಾತನಾಡಿ, ದಿನನಿತ್ಯದ ಜೀವನ ವೆಚ್ಚ ಹೆಚ್ಚಳದ ಜೊತೆಗೆ ಜಾಗದ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳೂ ಏರಿಕೆಯಾಗಿವೆ. ಹಿಂದೆ ಇದ್ದ ಸ್ಟ್ಯಾಂಪ್ ಪೇಪರ್ ವೆಚ್ಚಕ್ಕೆ ಹೋಲಿಸಿದರೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಮತ ಪಡೆದು, ಅದೇ ಮತದಾರರ ಮೇಲೆ ಬೆಲೆ ಏರಿಕೆಯ ಹೊರೆ ಹೇರುತ್ತಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಕ್ಷೇತ್ರ ಸಮಿತಿ ಸದಸ್ಯರಾದ ಕಬೀರ್ ಅಕ್ಕರಂಗಡಿ, ಯೂಸುಫ್ ಆಲಡ್ಕ, ಅಝೀಝ್ ಕಡಂಬು ಹಾಗೂ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು ಉಪಸ್ಥಿತರಿದ್ದರು.

ಬಿ.ಸಿ.ರೋಡ್ ಸಿಟಿ ಕೌನ್ಸಿಲ್ ಅಧ್ಯಕ್ಷ ಅನ್ವರ್ ಕೆ.ಎಚ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment