ನೆತ್ತರಕೆರೆ :ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ ‘ಕನ್ನಡ ದೀವಿಗೆ’ ಸಂಭ್ರಮ. ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ: ಜಬ್ಬಾರ್ ಸಮೊ

Coastal Bulletin
ನೆತ್ತರಕೆರೆ :ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ ‘ಕನ್ನಡ ದೀವಿಗೆ’ ಸಂಭ್ರಮ. ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ: ಜಬ್ಬಾರ್ ಸಮೊ

ಬಂಟ್ವಾಳ: ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ‘ಕನ್ನಡ ದೀವಿಗೆ’ ಶೀರ್ಷಿಕೆಯಡಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ವಿದ್ವಾಂಸರು, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಬ್ಬಾರ್ ಸಮೊ ಸಂಪಾಜೆ ಭಾಗವಹಿಸಿ ಮಾತನಾಡಿ, ಕನ್ನಡ ಭಾಷೆಯ ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ಯಕ್ಷಗಾನದ ಮೂಲಕ ಕನ್ನಡ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ದೊರೆತಿರುವ ಕೊಡುಗೆಯನ್ನು ವಿವರಿಸಿದರು. ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು, ಕನ್ನಡದ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಅಮೃತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಮಹೇಶ್ ಕೆ.ಎನ್. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ

ಹಿರಿಮೆಯನ್ನು ಸಾರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಉಪನ್ಯಾಸಕ ಸತೀಶ್ ಎ. ಆಚಾರ್ಯ ಅವರು ಕನ್ನಡ ಭಾಷೆಯ ಇತಿಹಾಸ, ಕರ್ನಾಟಕ ಏಕೀಕರಣದ ಹೋರಾಟ ಹಾಗೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಯ ಜವಾಬ್ದಾರಿಯನ್ನು ವಿವರಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ವಜ್ರಾಕ್ಷಿ ಸಾಲ್ಯಾನ್ ಬಹುಮಾನ ವಿತರಿಸಿದರು.

ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕೀರ್ತನಾ ರಾವ್ ಸ್ವಾಗತಿಸಿದರು. ಹಿಂದಿ ಉಪನ್ಯಾಸಕಿ ರಶ್ಮಿತಾ ವಂದಿಸಿದರು. ಪ್ರಿಯಾಂಕ ತೀರ್ಥರಾಮ್ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ, ಖಜಾಂಚಿ ಅಶ್ವಥ್ ಎಸ್. ರೈ, ಟ್ರಸ್ಟಿಗಳಾದ ದೀಪಿಕಾ ಸಂದೇಶ್, ಸಮತಾ ಕಿಶೋರ್, ಮೋಹನ್ ಕುಮಾರ್ ಬಿ., ಉಪಪ್ರಾಂಶುಪಾಲ ಆದಿತ್ಯ ವಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು 

Leave a Comment