ಬಂಟ್ವಾಳ: ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಎಂಬಲ್ಲಿ ನಿಸರ್ಗದತ್ತ ಜೀವನ ಮತ್ತು ಮೌಲ್ಯಾಧಾರಿತ ಶಿಕ್ಷಣದ ಉದ್ದೇಶದೊಂದಿಗೆ ಆರಂಭಗೊಂಡಿರುವ ‘ಪ್ರಕೃತಿ ಜ್ಞಾನಧಾಮ’ ಶೈಕ್ಷಣಿಕ ಸೇವಾ ಸಂಸ್ಥೆಯು ಗುರುವಾರ ಉದ್ಘಾಟನೆಗೊಂಡಿತು.
ಪೊಳಲಿ ಮಾದುಕೋಡಿ ಶ್ರೀ ಕೊರಗಜ್ಜ ಸಾನಿಧ್ಯದ ಆಡಳಿತ ಧರ್ಮದರ್ಶಿ ಹಾಗೂ ಶ್ರೀ ಸಾಯಿ ಹೀಲಿಂಗ್ ಸೆಂಟರ್‌ನ ಹಿರಿಯ ಗುರುಗಳಾದ ಶ್ರೀ ವಿಜಯ ಸುವರ್ಣ ಗುರೂಜಿಯವರು ದೀಪ ಬೆಳಗಿಸಿ, ಗಿಡ ನೆಡುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ಸೇವಾ ವಿವರಗಳ ಕರಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು
ಈ ಸಂದರ್ಭದಲ್ಲಿ ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ. ರಮೇಶ ನಾಯಕ್ ರಾಯಿ, ಇರ್ವತ್ತೂರು ಪದವು ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಟಿ. ಹರೀಂದ್ರ ಪೈ
ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಪ್ರಧಾನ ಶಿಕ್ಷಕ ಗೋಪಾಲ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು, ಯುವಜನರು ಹಾಗೂ ಆಸಕ್ತರಿಗೆ ನೈಸರ್ಗಿಕ ಜೀವನ ವಿಧಾನ, ಜೀವನ ಕೌಶಲ್ಯ, ಜೀವನ ಮೌಲ್ಯ, ಪರಿಸರ ಸಂರಕ್ಷಣೆ, ಡಿಜಿಟಲ್ ಡಿಟಾಕ್ಸ್, ಮಾನವೀಯ ಮೌಲ್ಯ ಹಾಗೂ ಪ್ರಕೃತಿ ಪ್ರೀತಿ ಸೇರಿದಂತೆ 30ಕ್ಕೂ ಹೆಚ್ಚು ವಿಷಯಗಳಲ್ಲಿ ಅನುಭವಿ ಶಿಕ್ಷಕರ ಮೂಲಕ ಶಿಕ್ಷಣ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯ ಸುವರ್ಣ ಗುರೂಜಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಾಮಾಜಿಕ ಕಾರ್ಯಕರ್ತರಾದ ಸುಪ್ರೀತ್ ಜೈನ್ ಇರ್ವತ್ತೂರು ಬೀಡು, ಚಂದ್ರಶೇಖರ ಆಚಾರ್ಯ ಹಲೆಪ್ಪಾಡಿ, ದೀಪಕ್ ಮಾದುಕೋಡಿ, ರೋಹಿಣಿ, ಓಬಯ್ಯ ಬಂಗೇರ ದಂಪತಿ, ಸುಗಂಧಿ, ನೃತ್ಯ ಶಿಕ್ಷಕಿ ಪ್ರತಿಮ ಗೋಪಾಲ ಅಂಚನ್, ಯಕ್ಷ್, ಯೆತ್ವಿಕ್ ಮತ್ತಿತರರು ಉಪಸ್ಥಿತರಿದ್ದರು.









