ಫರಂಗಿಪೇಟೆ: ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ. ದೀನರ ಸೇವೆಯಲ್ಲಿ ದೇವರನ್ನು ಕಾಣುವ ಕಾರ್ಯ ಶ್ಲಾಘನೀಯ: ಮಮ್ತಾಝ್ ಎಚ್.ಟಿ.

Coastal Bulletin
ಫರಂಗಿಪೇಟೆ: ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ. ದೀನರ ಸೇವೆಯಲ್ಲಿ ದೇವರನ್ನು ಕಾಣುವ ಕಾರ್ಯ ಶ್ಲಾಘನೀಯ: ಮಮ್ತಾಝ್ ಎಚ್.ಟಿ.

ಬಂಟ್ವಾಳ: ಸಮಾಜದ ದೀನದಲಿತರು ಹಾಗೂ ದುರ್ಬಲರ ಸೇವೆ ಮಾಡುವ ಮೂಲಕ ಸೇವೆಯಲ್ಲಿಯೇ ದೇವರನ್ನು ಕಾಣುವ ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಎಲ್ಲರಿಗೂ ಮಾದರಿಯಾಗಿದೆ ಎಂದು ಬಂಟ್ವಾಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮಮ್ತಾಝ್ ಎಚ್.ಟಿ. ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ದವಸಧಾನ್ಯ ವಿತರಿಸಿ ಅವರು ಮಾತನಾಡಿದರು.

ಕ್ಷಯಮುಕ್ತ ಸಮಾಜ ನಿರ್ಮಾಣ ಸುಲಭದ ಕಾರ್ಯವಲ್ಲ. ಆದರೆ ಕೃಷ್ಣಕುಮಾರ್ ಪೂಂಜ ಅವರು ಈ ಗುರುತರ ಜವಾಬ್ದಾರಿಯನ್ನು ವಹಿಸಿಕೊಂಡು ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮೆಚ್ಚುವಂತಹದ್ದು ಎಂದರು.

ಆರೋಗ್ಯ ಇಲಾಖೆಯ ಡೇವಿಡ್ ಮಾತನಾಡಿ, ಕೃಷ್ಣಕುಮಾರ್ ಪೂಂಜ ಅವರು ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಿಸುವುದರ ಜೊತೆಗೆ ಪ್ರತಿಯೊಬ್ಬ ರೋಗಿಯ ಆಹಾರದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ನಿರ್ವಹಿಸುವ ಅರ್ಧದಷ್ಟು ಕೆಲಸವನ್ನು ಅವರೇ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಅಧ್ಯಕ್ಷ ಎಸ್. ಚಂದ್ರಶೇಖರ ಗಾಂಭೀರ ಮುಖ್ಯ

ಅತಿಥಿಯಾಗಿ ಭಾಗವಹಿಸಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಇದು 50ನೇ ತಿಂಗಳ ಕಾರ್ಯಕ್ರಮವಾಗಿದ್ದು, ಈವರೆಗೆ ಸುಮಾರು 18.50 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 268 ಮಂದಿ ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಮೀನಾಕ್ಷಿ ನಾರಾಯಣ, ಟ್ರಸ್ಟಿ ಪ್ರಕಾಶ್ ಕಿದೆಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖರಾದ ನಾರಾಯಣ ಬಡ್ಡೂರು, ಪ್ರಶಾಂತ್ ತುಂಬೆ, ಶೇಖರ ಕಲ್ಲತಡಮೆ, ಚಂದ್ರಹಾಸ ಕಡೆಗೋಳಿ, ವೃಂದಾ ಪೂಜಾರಿ, ಶೋಭಾ ಕಳ್ಳಿಗೆ, ಗಾಯತ್ರಿ, ಉಮಾ ಚಂದ್ರಶೇಖರ್, ಸಾರಮ್ಮ ಮತ್ತಿತರರು ಉಪಸ್ಥಿತರಿದ್ದರು. ಎನಪೋಯ ಆಸ್ಪತ್ರೆಯ ಸಮುದಾಯ ಅಭಿವೃದ್ಧಿ ವಿಭಾಗದ ಡಾ. ಮಾಳವಿಕ ಹಾಗೂ ಡಾ. ಅನುಪಮ ನಾಯರ್ ಕ್ಷಯರೋಗಿಗಳ ಆರೋಗ್ಯ ವಿಚಾರಣೆ ನಡೆಸಿದರು.

Leave a Comment