ಉಪ್ಪಳ / ಜೋಡುಕಲ್ಲು:* ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಕಳೆದ ಹಲವಾರು ದಿನಗಳಿಂದ ನಿರಂತರ ಭಜನೆ, ಯಾಗ, ಧಾರ್ಮಿಕ ಕಾರ್ಯಕ್ರಮಗಳು, ಯತಿವರ್ಯರ ಭೇಟಿ ಮೊದಲಾದ ಕಾರ್ಯಕ್ರಮಗಳು ಮುಂದುವರಿಯುತ್ತಿವೆ.
ನಿನ್ನೆ ಶಿವಗಿರಿ ಮಠ ಮಡ್ಯಾರಿನ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಮತ್ತು ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಅವರು ಜೋಡುಕಲ್ಲು ಪರಿಸರಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು. ಸ್ಥಳಕ್ಕೆ ಹಗಲು-ರಾತ್ರಿ ವಿವಿಧೆಡೆಯಿಂದ ನೂರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
*ಅ.30 ರಂದು ಗುಳಿಗ ದೈವದ ಕೋಲ, ಪಾದಯಾತ್ರೆ:*
ಧರ್ಮ ಭೂಮಿ ಕೈ ತಪ್ಪದಿರಲು ಅ.30 ರಂದು ರಾತ್ರಿ ಸ್ಥಳದಲ್ಲಿ ಗುಳಿಗ ದೈವದ ಕೋಲ ನಡೆಸಲಾಯಿತು. ನೂರಾರು ಮಂದಿ ಪಾಲ್ಗೊಂಡು, ಗಣೇಶೋತ್ಸವ ನಡೆಯುವ ಭೂಮಿ ಕೈ ತಪ್ಪದಂತೆ ಪ್ರಾರ್ಥಿಸಿದರು.
ಧಾರ್ಮಿಕ ಭೂಮಿ ಸಂರಕ್ಷಣಾ ಚಳುವಳಿಯ ಅಂಗವಾಗಿ ನಿನ್ನೆ ಪ್ರತಾಪನಗರ ಗುಳಿಗ ಬನ ಪರಿಸರದಿಂದ ಜೋಡುಕಲ್ಲಿಗೆ ಪಾದಯಾತ್ರೆ ನಡೆದಿದ್ದು, ನೂರಾರು ಮಂದಿ ಪಾಲ್ಗೊಂಡಿದ್ದರು. ನ.1 ರಂದು ಅಪರಾಹ್ನ ಧರ್ಮ ಭೂಮಿ ಸಂರಕ್ಷಣಾ ಹೋರಾಟದ ಅಂಗವಾಗಿ "ಜೋಡುಕಲ್ಲು ಚಲೋ" ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಹೋರಾಟವನ್ನು ಮತ್ತಷ್ಟು
ಊರ್ಜಿತಗೊಳಿಸಲು ನಿರ್ಧರಿಸಲಾಗಿದೆ.
*ವಿವಾದದ ಹಿನ್ನೆಲೆ:*
ಜೋಡುಕಲ್ಲು ಬಸ್ ನಿಲ್ದಾಣದ ಬಳಿಯ ಶಿಶು ಮಂದಿರ ಪರಿಸರದಲ್ಲಿ ಅನೇಕ ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದ್ದು, ಈ ಜಾಗದಲ್ಲಿ ಸಭಾಂಗಣ ಮಾದರಿಯ ಚಪ್ಪರ ನಿರ್ಮಿಸಲಾಗಿದೆ. ಈ ಸ್ಥಳವನ್ನು ಲೋಕೋಪಯೋಗಿ ಇಲಾಖೆ ಅತಿಕ್ರಮಿಸಿದೆ ಎಂದು ಆರೋಪಿಸಿ ಸ್ಥಳೀಯ ಮುಸ್ಲಿಂ ಲೀಗ್ ಕಾರ್ಯಕರ್ತರೊಬ್ಬರು ಹೈಕೋರ್ಟ್ಗೆ ದೂರು ನೀಡಿದ್ದರು.
ದೂರನ್ನು ಪರಿಗಣಿಸಿದ ನ್ಯಾಯಾಲಯ, ಅತಿಕ್ರಮಣವಾಗಿರುವ ಸ್ಥಳದ ನಿರ್ಮಾಣ ಕಾಮಗಾರಿಗಳನ್ನು ತೆರವುಗೊಳಿಸಿ, ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ರಸ್ತೆ ವಿಭಾಗಕ್ಕೆ ಆದೇಶಿಸಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಸ್ವಾಧೀನ ಮತ್ತು ಸಭಾಂಗಣ ತೆರವು ಮಾಡಲು ಬರಬಹುದು ಎಂಬ ಆತಂಕದಿಂದ ಸಂಘ ಪರಿವಾರದ ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿಯೇ ಬೀಡುಬಿಟ್ಟು, ಭೂಮಿ ಸಂರಕ್ಷಣಾ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ಕಾರಣಕ್ಕೂ ಸ್ಥಳ ಸ್ವಾಧೀನ ಮತ್ತು ಚಪ್ಪರ ತೆರವುಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸಿ ಹೋರಾಟ ಮುಂದುವರಿಸಿದ್ದಾರೆ.









