ಬಿ ಸಿ ರೋಡ್ : ಕರಾವಳಿಯ ಜನಧ್ವನಿಯಾಗಿ ‘ವಂಶ’ ಅಂತರ್ಜಾಲ ಸುದ್ದಿ ಲೋಕಾರ್ಪಣೆ ಯುವ ಬರಹಗಾರರು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮಾಧ್ಯಮವಾಗಲಿ: ಮಹಾಬಲೇಶ್ವರ ಹೆಬ್ಬಾರ್

Coastal Bulletin
ಬಿ ಸಿ ರೋಡ್ : ಕರಾವಳಿಯ ಜನಧ್ವನಿಯಾಗಿ ‘ವಂಶ’ ಅಂತರ್ಜಾಲ ಸುದ್ದಿ ಲೋಕಾರ್ಪಣೆ ಯುವ ಬರಹಗಾರರು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮಾಧ್ಯಮವಾಗಲಿ: ಮಹಾಬಲೇಶ್ವರ ಹೆಬ್ಬಾರ್

ಬಂಟ್ವಾಳ: ಕರಾವಳಿ ಭಾಗದ ಜನರ ಧ್ವನಿಯಾಗಿ, ಪ್ರಚಲಿತ ಹಾಗೂ ಜನಪರ ಸುದ್ದಿಗಳನ್ನು ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ವಂಶ ಸಮೂಹ ಸಂಸ್ಥೆಯ ವತಿಯಿಂದ ಆರಂಭಿಸಲಾಗಿರುವ ನೂತನ ಅಂತರ್ಜಾಲ ಸುದ್ದಿ ಮಾಧ್ಯಮ ‘"ವಂಶ – ದಿ ವಾಯ್ಸ್ ಆಫ್ ಕೋಸ್ಟಲ್ ಏರಿಯಾ’"ಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಅವರು ಲೋಕಾರ್ಪಣೆಗೊಳಿಸಿದರು.

ಬಿ.ಸಿ.ರೋಡು ಮಿನಿ ವಿಧಾನಸೌಧದ ಎದುರುಗಡೆ ಕಾರ್ಯಾಚರಿಸುತ್ತಿರುವ ವಂಶ ಸಮೂಹ ಸಂಸ್ಥೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸುದ್ದಿ ಮಾಧ್ಯಮಕ್ಕೆ ಚಾಲನೆ ನೀಡಿ ಮಾತನಾಡಿದ ಮಹಾಬಲೇಶ್ವರ ಹೆಬ್ಬಾರ್, ಇಂದಿನ ವೇಗದ ಮಾಧ್ಯಮ ಯುಗದಲ್ಲಿ ಸತ್ಯ, ನಿಖರ ಮತ್ತು ಜನಪರ ಸುದ್ದಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಒಳಿತಿಗೆ ಪೂರಕವಾಗುವ ಸುದ್ದಿಗಳಿಗೆ ಆದ್ಯತೆ ನೀಡುವ ಮೂಲಕ ‘ವಂಶ’ ಕರಾವಳಿ ಭಾಗದ ವಿಶ್ವಾಸಾರ್ಹ ಜನಧ್ವನಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಅಲ್ಲದೆ, ಯುವ ಬರಹಗಾರರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೂ ‘ವಂಶ’ ಮುಂದಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವಂಶ ಸಮೂಹ

ಸಂಸ್ಥೆಯ ಮಾಲಕ ಯಾದವ ಅಗ್ರಬೈಲು, ಅವರ ಧರ್ಮಪತ್ನಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್, ಮಂಗಳೂರು ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ದೇವದಾಸ ಅಗ್ರಬೈಲು ಹಾಗೂ ಅವರ ಧರ್ಮಪತ್ನಿ ಬೆಸ್ಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಬಿತಾ ದೇವದಾಸ್ ಉಪಸ್ಥಿತರಿದ್ದರು.

ಪ್ರಚಲಿತ ಸುದ್ದಿಗಳೊಂದಿಗೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು, ಯುವ ಬರಹಗಾರರಿಗೆ ಅವಕಾಶ ನೀಡುವುದು ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವುದು ‘ವಂಶ – ದಿ ವಾಯ್ಸ್ ಆಫ್ ಕೋಸ್ಟಲ್ ಏರಿಯಾ’ದ ಪ್ರಮುಖ ಆಶಯವಾಗಿದೆ. ಕರಾವಳಿಯ ಸಂಸ್ಕೃತಿ, ಜನಜೀವನ ಮತ್ತು ಜನಪರ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಮಾಧ್ಯಮವಾಗಿ ‘ವಂಶ’ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂದು ಗಣ್ಯರು ಶುಭ ಹಾರೈಸಿದರು.

Leave a Comment