ಬಂಟ್ವಾಳ: ಸಮಾಜಮುಖಿ ಸೇವೆ, ಜನಪರ ಕಾಳಜಿ ಹಾಗೂ ಸಂಘಟನಾ ಸಾಮರ್ಥ್ಯಕ್ಕೆ ಮತ್ತೊಂದು ಪ್ರತಿಷ್ಠಿತ ಗೌರವ ಸಂದಿದೆ. ಸೇವೆಯನ್ನೇ ಧ್ಯೇಯವಾಗಿಸಿಕೊಂಡು ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಜೆಸಿಐ ಬಂಟ್ವಾಳವು 2026ನೇ ಸಾಲಿನಲ್ಲಿ ಬರೋಬ್ಬರಿ ಹತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಗಮನಾರ್ಹ ಸಾಧನೆ ಮಾಡಿದೆ. ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅವರ ಸಮರ್ಥ ನಾಯಕತ್ವದಲ್ಲಿ ಸಂಘಟನೆಯು ಸಾಧಿಸಿರುವ ಈ ಯಶಸ್ಸು ಬಂಟ್ವಾಳದ ಜೆಸಿ ಇತಿಹಾಸದಲ್ಲಿ ಹೆಮ್ಮೆಯ ಮೈಲಿಗಲ್ಲಾಗಿ ಮೂಡಿಬಂದಿದೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಆರ್ಯ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಜೆಸಿಐ ಬಂಟ್ವಾಳದ ಅಧ್ಯಕ್ಷ ಜೆಎಫ್ಡಿ ಕಿಶೋರ್ ಕುಮಾರ್ ಆಚಾರ್ಯ ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಸಂಕಷ್ಟದ ಬದುಕಿಗೆ ಸೂರಾದ ಸೇವೆ : ಪ್ರಶಸ್ತಿಗಳ ಸಾಲಿನಲ್ಲಿ ಜೆಸಿಐ ಬಂಟ್ವಾಳದ ಮಾನವೀಯ ಸೇವಾ ಕಾರ್ಯಗಳು ವಿಶೇಷ ಗಮನ ಸೆಳೆದಿವೆ. ಕಳೆದ ಐದು ವರ್ಷಗಳಿಂದ ಡೇರೆಯಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ಅವರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವುದು ಸಂಘಟನೆಯ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ.
ಜೆಸಿಐ ಬಂಟ್ವಾಳದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ನಿರ್ಮಿಸಲಾದ 'ಶ್ರೀ ಲಕ್ಷ್ಮೀ ಜೆಸಿ ನಿವಾಸ'ವನ್ನು ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್. ಆಚಾರ್ಯ ಅವರ ಮೂಲಕ ಹಸ್ತಾಂತರಿಸಲಾಗಿತ್ತು. ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಸ್ವಂತ ಮನೆಯ ಆಸರೆ ಕಲ್ಪಿಸಿದ ಈ ಯೋಜನೆ, ಸಂಘಟನೆಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಇದರೊಂದಿಗೆ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಬ್ಯಾರಿಕೇಡ್ಗಳ ಅಳವಡಿಕೆ, ಶಾಲೆಗಳಿಗೆ ಕಪಾಟು ಹಾಗೂ ಕುರ್ಚಿಗಳ ವಿತರಣೆ, ಆಟೋ ಚಾಲಕರು ಮತ್ತು ವಿದ್ಯಾರ್ಥಿಗಳಿಗೆ ಥರ್ಮಸ್ಗಳ ಕೊಡುಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಹಾಗೂ ತರಬೇತಿ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಹತ್ತಾರು ಜನಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಸಂಘಟಿತ ಶ್ರಮಕ್ಕೆ ಪ್ರಶಸ್ತಿಯ ಮನ್ನಣೆ : ಕೇವಲ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಸೀಮಿತವಾಗದೆ, ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಸಂಘಟನೆಯ ಬಲವರ್ಧನೆ ಹಾಗೂ ಸಮಾಜಕ್ಕೆ ದೀರ್ಘಕಾಲಿಕ ಪ್ರಯೋಜನ ನೀಡುವ ಯೋಜನೆಗಳ ಮೂಲಕ ಜೆಸಿಐ ಬಂಟ್ವಾಳ ತನ್ನದೇ ಆದ ಛಾಪು ಮೂಡಿಸಿದೆ. ಅಧ್ಯಕ್ಷರ ಮುಂದಾಳತ್ವ, ಪೂರ್ವಾಧ್ಯಕ್ಷರ ಮಾರ್ಗದರ್ಶನ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರ ಸಂಘಟಿತ ಪ್ರಯತ್ನಕ್ಕೆ ಇದೀಗ ಹತ್ತು ಪ್ರಶಸ್ತಿಗಳ ರೂಪದಲ್ಲಿ ಮನ್ನಣೆ ದೊರೆತಿದೆ.
ಜೆಸಿಐ
ಬಂಟ್ವಾಳದ ಮುಡಿಗೇರಿದ ಹತ್ತು ಪ್ರಶಸ್ತಿಗಳು :
1. ಔಟ್ಸ್ಟ್ಯಾಂಡಿಂಗ್ ಲೋಕಲ್ ಗ್ರೋತ್ ಅಂಡ್ ಡೆವಲಪ್ಮೆಂಟ್ ಪ್ರೋಗ್ರಾಂ ಆಫ್ ದ ಝೋನ್ ವಿನ್ನರ್ ಪ್ರೆಸಿಡೆಂಟ್ ಅವಾರ್ಡ್
2. ಸಿಲ್ವರ್ ಲೋಕಲ್ ಆರ್ಗನೈಸೇಶನ್ ಅವಾರ್ಡ್
3. ಮೌರ್ಯ ಪ್ರೆಸಿಡೆಂಟ್ಸ್ ಅವಾರ್ಡ್
4. ಸಸ್ಟೇನಬಲ್ ಪ್ರಾಜೆಕ್ಟ್ ಅವಾರ್ಡ್
5. ಥರ್ಡ್ ಡೇ ಆಫ್ ಜೆಸಿ ವೀಕ್ ಅವಾರ್ಡ್
6. 100 ಪರ್ಸೆಂಟ್ ಎಫಿಷಿಯನ್ಸಿ ಪ್ಲಾಟಿನಂ ಅಚೀವರ್ ಅವಾರ್ಡ್
7. ಜೆಸಿಐ ವೀಕ್ 777 ಅಚೀವರ್ ಅವಾರ್ಡ್
8. ಡೈಮಂಡ್ ಲೋಕಲ್ ಆರ್ಗನೈಸೇಶನ್ ಅವಾರ್ಡ್
9. ಜೆಸಿಐ ವೀಕ್ 777 ಡೇ-1 ಟಾಪ್-5 ಅವಾರ್ಡ್
10. ಸ್ಟಾರ್ ಪ್ರೆಸಿಡೆಂಟ್ ಅವಾರ್ಡ್
ತಂಡದ ಒಗ್ಗಟ್ಟಿಗೆ ಸಂದ ಗೌರವ : ಒಬ್ಬರ ನಾಯಕತ್ವ ಸಂಘಟನೆಗೆ ದಿಕ್ಕು ತೋರಿಸಿದರೆ, ತಂಡದ ಒಗ್ಗಟ್ಟು ಅದನ್ನು ಯಶಸ್ಸಿನ ಶಿಖರಕ್ಕೇರಿಸುತ್ತದೆ ಎಂಬುದಕ್ಕೆ ಜೆಸಿಐ ಬಂಟ್ವಾಳದ ಈ ಸಾಧನೆಯೇ ಸಾಕ್ಷಿ. ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅವರ ನೇತೃತ್ವದಲ್ಲಿ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರತಿಯೊಬ್ಬ ಸದಸ್ಯರು ತೋರಿದ ಬದ್ಧತೆ ಮತ್ತು ಪರಿಶ್ರಮ ಈ ಹತ್ತು ಪ್ರಶಸ್ತಿಗಳ ಹಿಂದಿನ ಶಕ್ತಿಯಾಗಿದೆ.
ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಹಾಗೂ ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಆಶಯದೊಂದಿಗೆ ಮುನ್ನಡೆಯುತ್ತಿರುವ ಜೆಸಿಐ ಬಂಟ್ವಾಳಕ್ಕೆ ಈ ಪ್ರಶಸ್ತಿಗಳು ಮತ್ತಷ್ಟು ಜನಪರ ಹಾಗೂ ಶಾಶ್ವತ ಸೇವಾ ಯೋಜನೆಗಳನ್ನು ಕೈಗೊಳ್ಳಲು ಹೊಸ ಸ್ಫೂರ್ತಿ ನೀಡಿವೆ.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಪೂರ್ವಾಧ್ಯಕ್ಷ ಜೇಸಿ ಉಮೇಶ್ ಮೂಲ್ಯ, ಲೇಡಿ ಜೇಸಿ ಕೋಆರ್ಡಿನೇಟರ್ ಅನುಷಾ ಕಿಶೋರ್, ಜೇಸಿ ಸುಮತ ಆಚಾರ್ಯ, ಜೇಸಿ ಭುವನೇಶ್, ಸಿಂಧು ಸಂತೋಷ್ ಶೆಟ್ಟಿ, ಜೇಸಿ ಸುಶ್ಮಿತಾ, ಜೇಸಿ ಸೌಮ್ಯ ಶಶಿಕಿರಣ್ ಹಾಗೂ ಜೇಸಿ ಶಶಿಕಿರಣ್ ಆಚಾರ್ಯ ಕಲ್ಲಡ್ಕ ಉಪಸ್ಥಿತರಿದ್ದರು.









