ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಪೂರ್ಣ ಉಚಿತ ಚಿಕಿತ್ಸೆ

Coastal Bulletin
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಪೂರ್ಣ ಉಚಿತ ಚಿಕಿತ್ಸೆ

ಬಂಟ್ವಾಳ: ತೀವ್ರ ಸೊಂಟದ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಅತ್ಯಂತ ಕ್ಲಿಷ್ಟಕರವಾದ ಎಡ ಸೊಂಟದ ಬದಲಾವಣೆ (ಲೆಫ್ಟ್ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ನೆರವೇರಿದ್ದು, ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಪ್ರಥಮವಾಗಿದೆ.

8 ತಿಂಗಳಿಂದ ಸೊಂಟದ ನೋವು:

ಬಂಟ್ವಾಳ ತಾಲೂಕಿನ 41 ವರ್ಷದ ವ್ಯಕ್ತಿಯೊಬ್ಬರು ಕಳೆದ ಎಂಟು ತಿಂಗಳಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಅವರಿಗೆ 'ಬೈಲ್ಯಾಟರಲ್ ಹಿಪ್ ಅವಾಸ್ಕುಲರ್ ನೆಕ್ರೋಸಿಸ್' ಕಾಯಿಲೆ ಇರುವುದು ಪತ್ತೆಯಾಗಿತ್ತು. ಎಡಭಾಗದ ಸೊಂಟವು ಬಲಭಾಗಕ್ಕಿಂತ ಹೆಚ್ಚು ಹಾನಿಗೊಳಗಾಗಿತ್ತು. ಈ ಹಿಂದೆ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಮೂಳೆ ತಜ್ಞರನ್ನು ಸಂಪರ್ಕಿಸಿದಾಗ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ಸಲಹೆ ನೀಡಲಾಗಿತ್ತು. ಬಳಿಕ ಸ್ಥಳೀಯರಾದ ವೃಂದಾ ಅವರ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು.

ನ.17ರಂದು ಯಶಸ್ವಿ ಶಸ್ತ್ರಚಿಕಿತ್ಸೆ:

ರೋಗಿಯ ಪರಿಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು. ನವೆಂಬರ್ 4ರಂದು ಯೋಜನೆಗೆ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್

11ರಂದು ಅನುಮೋದನೆ ದೊರೆತಿತ್ತು. ಅದರಂತೆ ನವೆಂಬರ್ 17ರಂದು ಎಡ ಸೊಂಟದ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ವೈದ್ಯಕೀಯ ತಂಡದ ಸಾಧನೆ:

ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕರಾದ ಡಾ. ಅಭಿಷೇಕ್ ಶೆಟ್ಟಿ ಹಾಗೂ ಆಸ್ಪತ್ರೆಯ ಮೂಳೆ ತಜ್ಞ ಡಾ. ಚೇತನರಾಜ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು.

ಅರವಳಿಕೆ ತಜ್ಞರಾದ ಡಾ. ವಿದ್ಯಾಸಾಗರ್, ಡಾ. ತುಷಾರ್ ಕೆ., ಶುಶ್ರೂಷಾಧಿಕಾರಿಗಳಾದ ವಾಣಿ, ಪುಷ್ಪಾ, ಕೀರ್ತಿಶಾಲಿನಿ, ತಂತ್ರಜ್ಞರಾದ ಧನ್ಯಾ, ಶಶಿಕಲಾ ಹಾಗೂ ಡಿ ದರ್ಜೆ ನೌಕರರಾದ ಸವಿತಾ, ಜಲಜಾ ಮತ್ತು ಚಂದ್ರಾವತಿ ಸಹಕರಿಸಿದ್ದರು.

ಈ ಕುರಿತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ಮಾಹಿತಿ ನೀಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ದೊರೆತಿರುವುದಕ್ಕೆ ರೋಗಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Comment