breaking news

ಪಂಜಿಮೊಗರು: ಯುವವಾಹಿನಿಯ ನೂತನ ಆಡಳಿತ ಕಚೇರಿ ಲೋಕಾರ್ಪಣೆ ನಾಲ್ಕು ದಶಕಗಳ ಸಂಘಟನಾ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲು

Coastal Bulletin
ಪಂಜಿಮೊಗರು: ಯುವವಾಹಿನಿಯ ನೂತನ ಆಡಳಿತ ಕಚೇರಿ ಲೋಕಾರ್ಪಣೆ ನಾಲ್ಕು ದಶಕಗಳ ಸಂಘಟನಾ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲು

ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಬಹುದಿನಗಳ ಕನಸಾದ ನೂತನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭ ನ. 15ರಂದು ಮಂಗಳೂರಿನ ವಿದ್ಯಾನಗರ, ಪಂಜಿಮೊಗರು ಪ್ರದೇಶದಲ್ಲಿ ನಡೆಯಿತು.

ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೂತನ ಕಚೇರಿಯನ್ನು ಉದ್ಘಾಟಿಸಿದರು. ಶಾಸಕ ಡಾ. ವೈ. ಭರತ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ದೀಪ ಪ್ರಜ್ವಲನೆ ನೆರವೇರಿಸಿದರೆ, ಪದ್ಮರಾಜ್ ಆರ್. ಪೂಜಾರಿ ನಾಮಫಲಕ ಅನಾವರಣಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ನಾಲ್ಕು ದಶಕಗಳ ಸಂಘಟನಾ ಪಯಣದಲ್ಲಿ ಸ್ವಂತ ಆಡಳಿತ ಕಚೇರಿಯ ನಿರ್ಮಾಣದ ಕನಸು ನನಸಾಗಲು ದಾನಿಗಳು, ಸಮಾಜ ಬಾಂಧವರು ಹಾಗೂ ಸಂಘಟನೆಯ ಪದಾಧಿಕಾರಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು.

ಆಶೀರ್ವಚನ ನೀಡಿದ ವಿಖ್ಯಾತಾನಂದ ಸ್ವಾಮೀಜಿಯವರು, ಸಮಾಜದ ಉನ್ನತಿ ಹಾಗೂ ಮಾನವೀಯ ಮೌಲ್ಯಗಳ ವೃದ್ಧಿಗೆ ಸಂಘಟಿತ ಪ್ರಯತ್ನ ಅಗತ್ಯ. ಶಿಕ್ಷಣ, ಸಂಸ್ಕಾರ ಮತ್ತು ಸೇವೆಯ ಮೂಲಕ ಯುವಜನತೆಯನ್ನು ಸಮಾಜಮುಖಿಯಾಗಿ ರೂಪಿಸುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದರು.

ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸಂಘಟನೆಗಳು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ಗುರುತಿಸಿಕೊಳ್ಳಬೇಕು. ಯುವವಾಹಿನಿ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸಿದರು.

ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಯುವವಾಹಿನಿಯ ಸಂಘಟನಾ ಶಕ್ತಿ ಮತ್ತು ಸಮಾಜಮುಖಿ ಚಟುವಟಿಕೆಗಳು ಶ್ಲಾಘನೀಯ. ನೂತನ ಆಡಳಿತ ಕಚೇರಿಯು ಸಂಸ್ಥೆಯ ಮುಂದಿನ ಬೆಳವಣಿಗೆಗೆ ಭದ್ರ ಬುನಾದಿಯಾಗಲಿ ಎಂದರು.

ಪದ್ಮರಾಜ್ ಆರ್.

ಪೂಜಾರಿ ಅವರು ಯುವವಾಹಿನಿಯ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಅಭಿನಂದಿಸಿ ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಗೌರವ ಉಪಸ್ಥಿತರಾಗಿ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅನಿಲ್ ಕುಮಾರ್, ರೋಹಿತ್ ಅಮೀನ್ ಮತ್ತು ಸುಮಂಗಲಾ, ಮಾಜಿ ಸದಸ್ಯರಾದ ದೀಪಕ್ ಪೂಜಾರಿ, ವಿಕಾಸ್ ಕಾಲೇಜಿನ ಟ್ರಸ್ಟಿ ಸೂರಜ್ ಕಲ್ಯಾ, ಡಾ. ಕಿರಣ್ ಕುಮಾರ್, ರಮೇಶ್ ಪೂಜಾರಿ ಚೆಲ್ಯಾರ್, ವಿದ್ಯಾನಗರ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಸುನೀಲ್ ಭಂಡಾರಿ, ಯುವವಾಹಿನಿ ಗೌರವ ಸಲಹೆಗಾರರಾದ ಟಿ.ಎನ್. ಪೂಜಾರಿ ಹಾಗೂ ಡಾ. ಎನ್.ಟಿ. ಅಂಚನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

1987ರ ಅಕ್ಟೋಬರ್ 2ರಂದು ಸ್ಥಾಪನೆಯಾದ ಯುವವಾಹಿನಿ 'ವಿದ್ಯೆ, ಉದ್ಯೋಗ, ಸಂಪರ್ಕ' ಎಂಬ ಧ್ಯೇಯವಾಕ್ಯದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ಸೇರಿದಂತೆ 35 ಘಟಕಗಳ ಮೂಲಕ ಐದು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಶಿಕ್ಷಣ, ಉದ್ಯೋಗ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೆ ನೂತನ ಕಚೇರಿಯು ಶಾಶ್ವತ ಸಂಘಟನಾ ಕೇಂದ್ರವಾಗಲಿದೆ.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಸೇರಿದಂತೆ ಕೇಂದ್ರ ಸಮಿತಿ ಹಾಗೂ ಕಟ್ಟಡ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾರಿಕ ಬಿ.ಎಚ್. ಪ್ರಾರ್ಥಿಸಿದರು. ರೇಣುಕಾ ಕಣಿಯೂರು ನಿರೂಪಿಸಿದರು. ಹರೀಶ್ ಕೆ. ಪೂಜಾರಿ ವಂದಿಸಿದರು.

Leave a Comment