ಬಂಟ್ವಾಳ: ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ಗೇಟ್ ಅನ್ನು ಎಲ್ಲರೂ ವಿರೋಧಿಸುತ್ತಿದ್ದಾರೆಯೇ ಹೊರತು ಸಮರ್ಥಿಸುವವರು ಯಾರೂ ಇಲ್ಲ ಎಂದು ಮಾಜಿ ಸಚಿವ ಹಾಗೂ ಬ್ರಹ್ಮರಕೂಟ್ಲು ಟೋಲ್ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಿ. ರಮಾನಾಥ ರೈ ಹೇಳಿದರು.
ಬ್ರಹ್ಮರಕೂಟ್ಲು ಟೋಲ್ಗೇಟ್ ತೆರವು ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಆರಂಭಗೊಂಡ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಅವರು ಮಾತನಾಡಿದರು.
ನೆರೆ ವಿಮೋಚನಾ ರಸ್ತೆಯಲ್ಲಿ ಸುಂಕ ವಸೂಲಿ ಮಾಡುವ ಜಗತ್ತಿನ ಏಕೈಕ ಟೋಲ್ಗೇಟ್ ಇದ್ದರೆ ಅದು ಬ್ರಹ್ಮರಕೂಟ್ಲು ಟೋಲ್ಗೇಟ್ ಮಾತ್ರ ಎಂದು ವ್ಯಂಗ್ಯವಾಡಿದ ಅವರು, ಇಲ್ಲಿನ ಟೋಲ್ಗೇಟ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಸುಂಕ ವಸೂಲಾತಿ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ. ಕೇಂದ್ರ ಹೆದ್ದಾರಿ ಇಲಾಖೆಯ ಅಂತರದ ನಿಯಮಗಳನ್ನೂ ಪಾಲಿಸಲಾಗುತ್ತಿಲ್ಲ. ಯಾವುದೇ ಸುಸಜ್ಜಿತ ವ್ಯವಸ್ಥೆಗಳಿಲ್ಲದೆ ಕೇವಲ ಹಣ ವಸೂಲಿ ಮಾಡುವ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ತೆರಳುವ ಪ್ರಯಾಣಿಕರು ಎರಡು ಕಡೆ ಟೋಲ್ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೆದ್ದಾರಿ ಪ್ರಾಧಿಕಾರದ ವರ್ತನೆ ಮಿತಿಮೀರುತ್ತಿದ್ದು, ಸಾರ್ವಜನಿಕರ ವಿರೋಧ ಹೆಚ್ಚಾಗುತ್ತಿದ್ದರೂ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಹೋರಾಟ ಸಮಿತಿ ಕೂಡ ಏಕಾಏಕಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿಲ್ಲ. ಕಾನೂನು ಮತ್ತು ನಿಯಮಗಳಿಗೆ ಗೌರವ ನೀಡಿ ಹಂತ ಹಂತವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಮುಂದೆಯೂ ಹೆದ್ದಾರಿ ಇಲಾಖೆ ಇದೇ ಧೋರಣೆ ಮುಂದುವರಿಸಿದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಬ್ರಹ್ಮರಕೂಟ್ಲು ಟೋಲ್ಗೇಟ್ ಯಾವಾಗ ಆರಂಭವಾಯಿತು ಎಂಬುದು ಮುಖ್ಯವಲ್ಲ. ಉಪ್ಪಿನಂಗಡಿ-ವಳಾಲಿನಲ್ಲಿ ಸುಂಕ ವಸೂಲಿ ಆರಂಭವಾಗುವ ದಿನ
ಬ್ರಹ್ಮರಕೂಟ್ಲು ಟೋಲ್ಗೇಟ್ನ ಅಂತ್ಯವಾಗಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ರಾಜ್ಯ ರೈತ ಸಂಘದ ರೂಪೇಶ್ ಮಾತನಾಡಿ, ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕ ಪಾವತಿಸದೆ ಅಸಹಕಾರ ಚಳವಳಿಗೆ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ಬ್ರಹ್ಮರಕೂಟ್ಲು ಟೋಲ್ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ಪಂಜಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಶ್ವಿನಿ ಕುಮಾರ್ ರೈ, ಅಬ್ಬಾಸ್ ಅಲಿ, ಉಷಾ ಅಂಚನ್, ಭಾರತಿ ಪ್ರಶಾಂತ್ ಮೊದಲಾದವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಪಿಯೂಷ್ ಎಲ್. ರೋಡ್ರಿಗಸ್, ಜಯಶೀಲ ಅಡ್ಯಂತಾಯ, ಮೋಹನ್ ಕೋಟ್ಯಾನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪದ್ಮನಾಭ ರೈ, ಲುಕ್ಮಾನ್ ಬಂಟ್ವಾಳ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಸುಧಾಕರ ಶೆಣೈ ಖಂಡಿಗ, ಸುರೇಶ್ ಕುಮಾರ್ ನಾವೂರ, ಉಮೇಶ್ ಬೋಳಂತೂರು, ಎ.ಬಿ. ಅಬ್ದುಲ್ಲ, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಪದ್ಮನಾಭ ಪೂಜಾರಿ, ದಿವಾಕರ ಪಂಬದಬೆಟ್ಟು, ಐಡಾ ಸುರೇಶ್, ಜಯಂತಿ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ಸಿರಾಜ್ ಮದಕ, ಯೂಸುಫ್ ಕರಂದಾಡಿ, ಲವೀನಾ ವಿಲ್ಮಾ ಮೊರಾಸ್, ಇಕ್ಬಾಲ್ ಜೆಟಿಟಿ, ಜೋಸ್ಮಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ಸಂಚಾಲಕ ಬಿ. ಶೇಖರ್ ಕಾರ್ಯಕ್ರಮ ನಿರೂಪಿಸಿದರು.










