ಪಣೋಲಿಬೈಲು :ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ನೂತನ ಅನ್ನಛತ್ರ ಕಟ್ಟಡ ಲೋಕಾರ್ಪಣೆ. ಜಗತ್ತಿಗೆ ಬೆಳಕು ನೀಡುವ ಸಾನಿಧ್ಯ ಪಣೋಲಿಬೈಲು: ಮಾಣಿಲ ಶ್ರೀ.

Coastal Bulletin
ಪಣೋಲಿಬೈಲು :ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ನೂತನ ಅನ್ನಛತ್ರ ಕಟ್ಟಡ ಲೋಕಾರ್ಪಣೆ. ಜಗತ್ತಿಗೆ ಬೆಳಕು ನೀಡುವ ಸಾನಿಧ್ಯ ಪಣೋಲಿಬೈಲು: ಮಾಣಿಲ ಶ್ರೀ.

ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ರೂ.2 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅನ್ನಛತ್ರ ಕಟ್ಟಡ ಸೋಮವಾರ ಲೋಕಾರ್ಪಣೆ ಗೊಂಡಿತು.


ಈ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಪಣೋಲಿಬೈಲು ಕ್ಷೇತ್ರದ ತಾಯಿ ಶಾಶ್ವತ ಶಕ್ತಿಯ ಸ್ವರೂಪ. ಯಾವುದೇ ಸಮಾಜ ಶಾಶ್ವತವಲ್ಲ. ಜಗತ್ತಿಗೆ ಬೆಳಕು ನೀಡುವ ಸಾನಿಧ್ಯವಾಗಿ ಪಣೋಲಿಬೈಲು ಕ್ಷೇತ್ರ ಗುರುತಿಸಿಕೊಂಡಿದೆ. ಮಹಿಮೆ ಹೊಂದಿರುವ ಈ ತಾಯಿಯ ಕ್ಷೇತ್ರದಲ್ಲಿ ಪ್ರತಿದಿನ ಅಗೇಲು ಸೇವೆ ನಡೆಯುವ ಭಾಗ್ಯ ಎಲ್ಲರಿಗೂ ದೊರೆಯಲಿ. ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಿ, ಈ ಮಣ್ಣಿನ ಕಾರ್ಣಿಕ ಹಾಗೂ ಮಹಿಮೆ ಜಗತ್ತಿನಾದ್ಯಂತ ಬೆಳಗಲಿ. ತುಳುನಾಡಿನ ಆಚರಣೆ, ನುಡಿಗಟ್ಟು ಹಾಗೂ ಸಂಪ್ರದಾಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ಪಣೋಲಿಬೈಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದ್ದು, ಇಲ್ಲಿ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ಆಗಮಿಸುತ್ತಾರೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ನೆಮ್ಮದಿ ಹಾಗೂ ಪವಿತ್ರ ಭಾವನೆಯೊಂದಿಗೆ ಹಿಂದಿರುಗುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮ ಇಲಾಖೆಯ ಮೇಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ದೇವರ ಕಾರ್ಯ ಯಾವಾಗ ನಡೆಯಬೇಕು ಎಂಬುದು ದೈವ

ಸಂಕಲ್ಪ. ಆ ಸಮಯ ಬಂದಾಗ ಕಾರ್ಯಗಳು ತಾನಾಗಿಯೇ ನೆರವೇರುತ್ತವೆ. ಕ್ಷೇತ್ರ ಇನ್ನಷ್ಟು ಬೆಳಗಲು ಹಾಗೂ ಅಭಿವೃದ್ಧಿ ಹೊಂದಲು ಹೆಚ್ಚಿನ ಜನರ ಸಹಕಾರ ಅಗತ್ಯವಿದೆ. ಧಾರ್ಮಿಕ ಕ್ಷೇತ್ರಗಳು ನಮ್ಮ ಪರಂಪರೆಯ ದ್ಯೋತಕವಾಗಿವೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಾತಿ-ಮತ ಭೇದ ಮರೆತು ಎಲ್ಲರೂ ಭಕ್ತಿ ಹಾಗೂ ನಂಬಿಕೆಯಿಂದ ಆಗಮಿಸುವ ಪವಿತ್ರ ಕ್ಷೇತ್ರ ಪಣೋಲಿಬೈಲು. ಮುಂದಿನ ದಿನಗಳಲ್ಲಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಸಜೀಪದ ಸುಬ್ರಹ್ಮಣ್ಯ ತಂತ್ರಿ, ಬಂಟ್ವಾಳ ತಹಶೀಲ್ದಾರ್ ಜಿ. ಮಂಜುನಾಥ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ದಿವಾಕರ ಮುಗುಳ್ಯ ಉಪಸ್ಥಿತರಿದ್ದರು.

ವಿವೇಕ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ, ಗಿರೀಶ್ ಪೂಜಾರಿ ವಂದಿಸಿದರು. ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈವಸ್ಥಾನದ ಅರ್ಚಕ ವೃಂದ, ಸಿಬ್ಬಂದಿ ವರ್ಗ, ಸಜೀಪ ಮಾಗಣೆ ಗುತ್ತಿನವರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

Leave a Comment