ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರೀ ಶಾರದೋತ್ಸವದ ದಶಮಾನೋತ್ಸವ "ದಶಾರದ ಸಂಭ್ರಮ-2026" ರ ಧಾರ್ಮಿಕ ಸಭೆಯಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರಿಗೆ "ಶ್ರೀ ಶಾರದ ತಿಲಕ ಪ್ರಶಸ್ತಿ" ಪ್ರದಾನ ಮಾಡಲಾಯಿತು.
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ, ಆಶೀರ್ವಚನ ನೀಡಿ ಇಲ್ಲಿನ ಶ್ರೀ ಸಮಿತಿಗಳು ಉತ್ಸವಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ನಿತ್ಯ ನಿರಂತರ ರಚನಾತ್ಮಕ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಜನಸಮುದಾಯದ ಪ್ರೀತಿ-ಗೌರವಾದರಗಳಿಗೆ ಪಾತ್ರವಾಗಿದೆ. ಜನಮಾನಸದಲ್ಲಿ ಧಾರ್ಮಿಕ ಜಾಗೃತಿ, ಸಂಸ್ಕಾರ ಮತ್ತು ಸಂಸ್ಕೃತಿಯ ಉದ್ದೀಪನ ಕಾರ್ಯದೊಂದಿಗೆ ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಗತಿಯಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವುದು ಗಮನಾರ್ಹ ಅಂಶವೆಂದರು
ಪ್ರಶಸ್ತಿ ಸ್ವೀಕರಿಸಿದ ಡಾ.ಮೋಹನ ಆಳ್ವ ಮಾತನಾಡಿ ಭಾರತೀಯ ಸಂಸ್ಕ್ರತಿ ಶ್ರೇಷ್ಠವಾದುದು. ಇಂತಹ ಅನನ್ಯ ಸಾಂಸ್ಕ್ರತಿಕ, ಆಧ್ಯಾತ್ಮಿಕ ಮತ್ತು ಸಾಮರಸ್ಯದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ:
ಇದೇ ಸಂದರ್ಭ ಸಾಹಿತಿ ಗೋಪಾಲ ಅಂಚನ್ ಪ್ರಧಾನ ಸಂಪಾದಕತ್ವದ "ದಶಾರದ" ಸ್ಮರಣ ಸಂಚಿಕೆಯನ್ನು ಸ್ವಾಮೀಜಿಯವರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು. ದಶಾರದ ಪುರಸ್ಕಾರ: ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕಿ ವಿಷ್ಣು ಪ್ರಿಯಾ ಪೈ ಅವರಿಗೆ "ಶ್ರೀ ದಶಾರದ ಪುರಸ್ಕಾರ" ವನ್ನು ಮೋಹನ ಆಳ್ವರು ಪ್ರದಾನ ಮಾಡಿದರು.
ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂಸದ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರು ಸರಕಾರಿ ಲೇಡಿಗೋಷನ್ ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್ ಎಂ.ಆರ್., ಮಾವಂತೂರು ಬಲವಂಡಿ ಕ್ಷೇತ್ರದ ಗಡಿ ಪ್ರಧಾನರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು,
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ.ತುಂಗಪ್ಪ ಬಂಗೇರಾ, ಬಿ.ಪದ್ಮಶೇಖರ ಜೈನ್, ಹರ್ಷ ಸಂಪಿಗೆತ್ತಾಯ, ಉದ್ಯಮಿ ಡಾ.ವರದರಾಜ ಪೈ, ನ್ಯಾಯವಾದಿ ಸುರೇಶ್ ಶೆಟ್ಟಿ, ಎಸ್ ಡಿಎಂಸಿ ಅಧ್ಯಕ್ಷೆ ಶಾಲಿನಿ ಯತೀಶ್ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದರು.
ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ವಂದಿಸಿದರು. ಹಿರಿಯ ರಂಗ ಕಲಾವಿದ ಎಚ್ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ, ಶ್ರೀ ಶಾರದ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಹರೀಂದ್ರ ಪೈ, ನಿರ್ದೇಶಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಉಪಾಧ್ಯಕ್ಷ ಶೇಖರ ಪೂಜಾರಿ ಅಗಲ್ದೋಡಿ, ದಶಮಾನೋತ್ಸವ ಸಮಿತಿ ಸಂಚಾಲಕ ಶಂಕರ ಶೆಟ್ಟಿ ಬೆದ್ರಮಾರು, ಸಾಂಸ್ಕ್ರತಿಕ ಸಮಿತಿ ಸಂಚಾಲಕ ಗೋಪಾಲ ಅಂಚನ್, ಸಮಿತಿ ಪ್ರಮುಖರಾದ ಚಂದ್ರಹಾಸ ನಾಯ್ಕ ಎರ್ಮೆನಾಡು, ಸುಪ್ರೀತ್ ಜೈನ್ ಎಡ್ತೂರುಗುತ್ತು, ಪ್ರಶಾಂತ್ ಕೋಟ್ಯಾನ್ ಮೇಗಿನ ಮನೆ, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ, ಸತೀಶ ಕರ್ಕೆರಾ ಕಯ್ಯಾಬೆ ಮೊದಲಾದವರು ಉಪಸ್ಥಿತರಿದ್ದರು. ಬೆಳಿಗ್ಗೆ ಶ್ರೀಶಾರದಾ ದೇವಿಯ ಪ್ರತಿಷ್ಠೆ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಭಕ್ತಿ ರಸಮಂಜರಿ, ಅನ್ನಸಂತರ್ಪಣೆ, ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ, ನೃತ್ಯ ವೈಭವ, ಭರತನಾಟ್ಯ, ರಾತ್ರಿ ತುಳು ನಾಟಕ ನಡೆಯಿತು.













