ಬಂಟ್ವಾಳ: ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚಿಸುವುದು, ಮಕ್ಕಳ ದಾಖಲಾತಿ ಪ್ರಮಾಣವನ್ನು ವೃದ್ಧಿಸುವುದು, ಖಾಸಗಿ ಶಾಲೆಗಳತ್ತ ಮಕ್ಕಳ ವಲಸೆಯನ್ನು ತಗ್ಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಹಾಗೂ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ಒದಗಿಸುವುದು ಹೀಗೆ ಹಲವು ಉದ್ದೇಶದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಈ ತರಗತಿಗಳ ನಿರ್ವಹಣೆಗಾಗಿ ಅತಿಥಿ ಶಿಕ್ಷಕಿಯರು ಹಾಗೂ ಸಹಾಯಕಿಯರನ್ನು ನೇಮಕ ಮಾಡಲಾಗಿದೆ. ಆದರೆ, ತರಗತಿಗಳನ್ನು ನಿರ್ವಹಿಸುತ್ತಿರುವ ಇವರಿಗೆ ಕಳೆದ ನಾಲ್ಕು ತಿಂಗಳಿಂದ ಗೌರವಧನ ಪಾವತಿಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.
ಜೂನ್ ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ನಾಲ್ಕು ತಿಂಗಳು ಕಳೆದರೂ ಗೌರವಧನ ಪಾವತಿಯಾಗಿಲ್ಲ. ಸಾಲುಸಾಲು ಹಬ್ಬಗಳು ಮುಗಿದರೂ ವೇತನ ಕೈ ಸೇರದಿರುವುದರಿಂದ, ಬಾಕಿ ಗೌರವಧನ ಯಾವಾಗ ಖಾತೆಗೆ ಜಮೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಶಿಕ್ಷಕಿಯರು ಹಾಗೂ ಸಹಾಯಕಿಯರು ಕಾಯುತ್ತಿದ್ದಾರೆ
ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಎಲ್ಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ತರಗತಿಗಳನ್ನು ವಿಸ್ತರಿಸಲಾಗಿದ್ದು, ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ತರಗತಿಗಳ ನಿರ್ವಹಣೆಗಾಗಿ ಸ್ಥಳೀಯ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಗಳ ಮೂಲಕ ಶಿಕ್ಷಕಿಯರು ಹಾಗೂ ಸಹಾಯಕಿಯರನ್ನು ನೇಮಿಸಲಾಗಿದೆ.
ಅನುದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಇಲಾಖೆ:
ಗೌರವಧನ ಪಾವತಿಗೆ ಸಂಬಂಧಿಸಿದ ತಾಂತ್ರಿಕ ಬದಲಾವಣೆಗಳು ಹಾಗೂ ಅನುದಾನ ಬಿಡುಗಡೆ ಪ್ರಕ್ರಿಯೆಗಳಿಂದ ವಿಳಂಬ ಉಂಟಾಗಿದೆ ಎನ್ನಲಾಗಿದೆ. ಹಿಂದಿನ ಪಿಎಫ್ಎಂಎಸ್ ವ್ಯವಸ್ಥೆಯ ಬದಲಿಗೆ ಎಸ್ಎನ್ಎ ಸ್ಪರ್ಶ್ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಅಗತ್ಯ ಮ್ಯಾಪಿಂಗ್ ಮತ್ತು ಹಣಕಾಸು ಅನುಮೋದನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿತ್ತು.
ಗೌರವಧನದ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಪಾಲು ನೀಡುತ್ತವೆ. ಕೇಂದ್ರದ ಅನುದಾನ ಬಂದ ಬಳಿಕ ರಾಜ್ಯದ
ಪಾಲಿನ ಅನುದಾನ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗುತ್ತದೆ. ಈ ಎಲ್ಲ ಹಂತಗಳು ಮುಗಿದ ನಂತರವಷ್ಟೇ ಪಾವತಿ ಸಾಧ್ಯವಾಗುತ್ತದೆ. ಸದ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಎರಡರಿಂದ ಮೂರು ದಿನಗಳೊಳಗೆ ಗೌರವಧನ ಪಾವತಿಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ಲಭ್ಯವಾಗಿದೆ.
ಗೌರವಧನದ ಮೊತ್ತ ಎಷ್ಟು?
ನೇಮಕಗೊಂಡ ಪೂರ್ವ ಪ್ರಾಥಮಿಕ ಅತಿಥಿ ಶಿಕ್ಷಕಿಗೆ ತಿಂಗಳಿಗೆ ₹10,000 ಹಾಗೂ ಸಹಾಯಕಿಗೆ ₹6,250 ಗೌರವಧನ ನಿಗದಿಪಡಿಸಲಾಗಿದೆ. ಆದರೆ, ಸೇವೆ ಸಲ್ಲಿಸುತ್ತಿದ್ದರೂ ನಿಗದಿತ ಮೊತ್ತ ದೊರೆಯದಿರುವುದು ಸಿಬ್ಬಂದಿಯ ಆರ್ಥಿಕ ನಿರ್ವಹಣೆಗೆ ತೊಂದರೆ ಉಂಟುಮಾಡಿದೆ. ತಿಂಗಳ ಖರ್ಚು, ಕುಟುಂಬದ ಅಗತ್ಯಗಳು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲು ಗೌರವಧನದ ಮೇಲೆಯೇ ಅವಲಂಬಿತರಾಗಿರುವವರಿಗೆ ವಿಳಂಬವು ಹೊರೆಯಾಗುತ್ತಿದೆ.
ಮಾಸಿಕ ಪಾವತಿಗೆ ವ್ಯವಸ್ಥೆ ರೂಪಿಸಲು ಒತ್ತಾಯ:
ಬಾಕಿ ಉಳಿದಿರುವ ನಾಲ್ಕು ತಿಂಗಳ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದು ಸಿಬ್ಬಂದಿಯ ಒತ್ತಾಯ. ಪ್ರತಿಬಾರಿಯೂ ಅನುದಾನ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಕಾರಣದಿಂದ ವೇತನ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ಗೌರವಧನ ಖಾತೆಗೆ ಜಮೆಯಾಗುವ ವ್ಯವಸ್ಥೆ ಕಲ್ಪಿಸುವ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬ ಆಗ್ರಹವು ಕೇಳಿಬಂದಿದೆ.













