ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿಯ ಆಶ್ರಯದಲ್ಲಿ ಅ.18 ಮತ್ತು 19ರಂದು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀ ಶಾರದೋತ್ಸವದ ದಶಮಾನೋತ್ಸವ ‘ದಶಾರದ ಸಂಭ್ರಮ-2026’ ವೈಭವದಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರಿಗೆ ‘ಶ್ರೀ ಶಾರದ ತಿಲಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ವೈವಿಧ್ಯಮಯ ಕಾರ್ಯಕ್ರಮ:
ಅ.18ರಂದು ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಭಕ್ತಿ ರಸಮಂಜರಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ, ನೃತ್ಯ ವೈಭವ ಮತ್ತು ಭರತನಾಟ್ಯ ಪ್ರದರ್ಶನ ಜರುಗಲಿದೆ.
ಸಂಜೆ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಡಾ. ಮೋಹನ ಆಳ್ವ ಅವರಿಗೆ ‘ಶ್ರೀ ಶಾರದ ತಿಲಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ‘ದಶಾರದ’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ರಾತ್ರಿ ತುಳು ನಾಟಕ ಪ್ರದರ್ಶನ ನಡೆಯಲಿದೆ.
ಅ.19ರಂದು ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ, ತಾಲೂಕು ಮಟ್ಟದ ಆಯ್ದ ತಂಡಗಳಿಂದ ಮಕ್ಕಳ ಕುಣಿತ ಭಜನಾ ಸ್ಪರ್ಧೆ, ನೃತ್ಯ ವೈಭವ ಹಾಗೂ ಮಹಾಪೂಜೆ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ಮತ್ತು ಯಕ್ಷಗಾನ ತಾಳಮದ್ದಳೆ ಜರುಗಲಿದ್ದು, ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ.
ಈಗಾಗಲೇ ಹಲವು ಕಾರ್ಯಕ್ರಮಗಳ ಯಶಸ್ಸು:
ದಶಮಾನೋತ್ಸವದ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಹಾಗೂ ಮುಕ್ತ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಒಳಗೊಂಡ ‘ದಶಾರದ ಸಾಂಸ್ಕೃತಿಕ ಸಂಭ್ರಮ’, ದಸರಾ ಕ್ರೀಡೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ‘ದಶಾರದ ಪುರಸ್ಕಾರ’, ಗುರುವಂದನೆ ಹಾಗೂ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮಗಳನ್ನು ಈಗಾಗಲೇ ಯಶಸ್ವಿಯಾಗಿ ಆಯೋಜಿಸಲಾಗಿದೆ. ಇದೀಗ ಮುಖ್ಯ ಉತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಶ್ರೀ ಶಾರದ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಕಾರ್ಯಾಧ್ಯಕ್ಷ ಟಿ. ಹರೀಂದ್ರ ಪೈ, ಉಪಾಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ ಹಾಗೂ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್. ಎರ್ಮೆನಾಡು ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಶ್ರೀ ಶಾರದೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ನಾಯ್ಕ ಎರ್ಮೆನಾಡು, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ, ಸಂಚಾಲಕ ಶಂಕರ ಶೆಟ್ಟಿ ಬೆದ್ರಮಾರು ಹಾಗೂ ದಶಮಾನೋತ್ಸವ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಗೋಪಾಲ ಅಂಚನ್ ಸೇರಿದಂತೆ ನಿರ್ದೇಶಕ ಮಂಡಳಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಮಾಜಮುಖಿ ಸೇವೆಯಲ್ಲಿ ದಶಪಯಣ:
ಶ್ರೀ ಶಾರದೋತ್ಸವ ಸೇವಾ ಸಮಿತಿಯು ಕಳೆದ ಹತ್ತು
ವರ್ಷಗಳ ಪಯಣದಲ್ಲಿ ಧಾರ್ಮಿಕ ಜಾಗೃತಿ, ಸಂಸ್ಕಾರ ಮತ್ತು ಸಂಸ್ಕೃತಿಯ ಬೆಳವಣಿಗೆಯೊಂದಿಗೆ ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನ್ನಣೆ ಗಳಿಸಿದೆ.
ಕೊರೊನಾ ಸಂದರ್ಭದಲ್ಲಿ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ, ಉಚಿತ ಆರೋಗ್ಯ ಶಿಬಿರಗಳು, ಜೇನು ಸಾಕಾಣಿಕೆ ತರಬೇತಿ, ಪವರ್ಮ್ಯಾನ್ಗಳಿಗೆ ಗೌರವ, ಆಧಾರ್ ನೋಂದಣಿ ಹಾಗೂ ಕಾರ್ಮಿಕರ ನೋಂದಣಿ ಶಿಬಿರ, ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೆರವು, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ಶಾಲೆಗೆ ಸ್ಟೀಲ್ ಕಪಾಟು ಕೊಡುಗೆ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಕ್ಯಾನ್ಸರ್ ಜಾಗೃತಿ ಅಭಿಯಾನವನ್ನೂ ಆಯೋಜಿಸಿದೆ.
ಭಾರತ ಸರಕಾರದ ‘ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ’ದಡಿ ಸಮಿತಿಯನ್ನು ‘ನಿಕ್ಷಯ ಮಿತ್ರ’ ಎಂದು ಗುರುತಿಸಲಾಗಿದೆ. ಇದರ ಮೂಲಕ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಂಟು ಕ್ಷಯರೋಗಿಗಳಿಗೆ ಆರು ತಿಂಗಳ ಕಾಲ ಸುಮಾರು ₹60 ಸಾವಿರ ವೆಚ್ಚದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.
ಶಾಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ:
ಶ್ರೀ ಶಾರದ ಸೇವಾ ಟ್ರಸ್ಟ್ (ರಿ.) ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ಶಾಲೆಯ ಶೈಕ್ಷಣಿಕ ಪ್ರಗತಿಗೆ ಹಲವು ಕೊಡುಗೆಗಳನ್ನು ನೀಡಿದೆ.
ಶಾಲೆಯ ಗೌರವ ಶಿಕ್ಷಕಿಗೆ ಮಾಸಿಕ ಗೌರವಧನ, ಚಿತ್ರಕಲಾ ಮತ್ತು ನೃತ್ಯ ಶಿಕ್ಷಕರ ನೇಮಕ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ, ವನಮಹೋತ್ಸವ, ಪರೀಕ್ಷಾ ಸಿದ್ಧತಾ ಕಾರ್ಯಾಗಾರ, ಬೇಸಿಗೆ ಶಿಬಿರ, ಶಾಲಾ ಪ್ರವೇಶೋತ್ಸವ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಸಹಕಾರ ನೀಡಲಾಗಿದೆ. ₹25 ಸಾವಿರ ವೆಚ್ಚದಲ್ಲಿ ಕಂಪ್ಯೂಟರ್ ದುರಸ್ತಿ ಹಾಗೂ ಕಂಪ್ಯೂಟರ್ ಶಿಕ್ಷಕರ ನೇಮಕ, ಶಾಲೆಯ ಗೋಡೆಗಳಿಗೆ ಆಕರ್ಷಕ ಚಿತ್ರಗಳ ಅಲಂಕಾರವನ್ನೂ ಮಾಡಲಾಗಿದೆ.
ಮುಂದಿನ ಹಂತದಲ್ಲಿ ಶಾಲೆಗೆ ಒಳಾಂಗಣ ವೇದಿಕೆ ನಿರ್ಮಾಣ, ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆ, ಶಾಲೆಯ ಮುಂಭಾಗಕ್ಕೆ ಇಂಟರ್ಲಾಕ್ ಹಾಗೂ ಶೀಟ್ ಅಳವಡಿಕೆ ಮತ್ತು ತರಗತಿಗಳಿಗೆ ಸ್ಪೀಕರ್ ವ್ಯವಸ್ಥೆ ಕಲ್ಪಿಸುವ ಸುಮಾರು ₹15 ಲಕ್ಷ ಮೊತ್ತದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಸಹೃದಯಿ ದಾನಿಗಳ ನೆರವನ್ನು ಸಂಸ್ಥೆ ನಿರೀಕ್ಷಿಸುತ್ತಿದೆ.













