ತುಂಬೆ: 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ, ಧಾರ್ಮಿಕ ಸಭೆ,

Coastal Bulletin
ತುಂಬೆ: 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ, ಧಾರ್ಮಿಕ ಸಭೆ,

ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ತುಂಬೆ ರಾಮಲ್ ಕಟ್ಟೆಯ ಶ್ರೀ ಶಾರದಾ ಸಮುದಾಯ ಭವನದಲ್ಲಿ ನಡೆಯಿತು.


ಬೆಳಿಗ್ಗೆ ಉದ್ಯಮಿ ಬಸ್ತಿ ಮಾಧವ ಶೆಣೈ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭಜನಾ ಸಂಕೀರ್ತನೆ ಹಾಗೂ ಅಕ್ಷರಲೇಖನಾರಂಭ ಸಂಸ್ಕಾರ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಪೊಳಲಿ ಗಿರಿ ಪ್ರಕಾಶ್ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಶಾರದಾ ಮಾತೆಗೆ ಮಹಾಪೂಜೆ ನೆರವೇರಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಪ್ಪುವಿನ ಶ್ರೀ ಅಂಬಾ ಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ. ದೀಪ ಪ್ರಜ್ವಲಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಂಡು ಆರಾಧಿಸುವ ಅವಕಾಶವಿರುವ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಆರ್‌ಟಿಒ ಚರಣ್ ಮಾತನಾಡಿ, ಮಹಾಲಕ್ಷ್ಮಿಯ ಮೂಲಕ ರಾಜಸ ಆರಾಧನೆ, ಕಾಳಿಯ ಮೂಲಕ ತಾಮಸ ಆರಾಧನೆ ಹಾಗೂ ಸರಸ್ವತಿಯ ಮೂಲಕ ಸಾತ್ವಿಕ ಆರಾಧನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ ಮಾತನಾಡಿ, ಶಾರದೆಯು ವಿದ್ಯಾಧಿದೇವತೆಯಾಗಿ ಎಲ್ಲರನ್ನೂ ಸಲಹುತ್ತಾಳೆ. ಆಕೆ ಜ್ಞಾನದ ಸಂಕೇತವಾಗಿದ್ದಾಳೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆ

ಧನಲಕ್ಷ್ಮೀ ಗಟ್ಟಿ ಮಾತನಾಡಿ, “ಇದು ಬರೀ ಸಭಾಂಗಣವಲ್ಲ, ಶಕ್ತಿಯ ಆಲಯ. ಇಲ್ಲಿ ಧನಾತ್ಮಕತೆಯ ಕಂಪನವಿದೆ” ಎಂದರು. ಜನರಲ್ಲಿ ಧರ್ಮಜಾಗೃತಿ ಮೂಡಿಸುವ ಕಾರ್ಯವನ್ನು ತುಂಬೆಯ ಶ್ರೀ ಶಾರದಾ ಪ್ರತಿಷ್ಠಾನ ಮಾಡುತ್ತಿದ್ದು, ಈ ಕಾರ್ಯಕ್ಕೆ ತಾಯಿ ಶಾರದೆ ಪ್ರೇರಣೆಯಾಗಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಚ್ಛತಾ ದಂಡಯಾತ್ರೆ ನಡೆಸುತ್ತಿರುವ ನಾಗರಾಜ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು. ಹೂಹಾರ ಕಟ್ಟುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ದಿನೇಶ್ ಕೊಟ್ಟಿಂಜ ಸೇರಿದಂತೆ ಇತರರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆಯ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕಾರ್ಯದರ್ಶಿ ದಿವಾಕರ ಪೇರ್ಲಬೈಲು, ಕೋಶಾಧಿಕಾರಿ ರಾಘವ ಬಂಗೇರ ಪೇರ್ಲಬೈಲು, ಉಪಾಧ್ಯಕ್ಷೆ ಶೋಭಾ ಗೋಪಾಲ ಮೈಂದನ್, ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಕಿಶೋರ್ ನಿಸರ್ಗ ದೇಮುಂಡೆ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಾಲ್ಯಾನ್ ತುಂಬೆ, ಜೊತೆ ಕಾರ್ಯದರ್ಶಿ ರವಿರಾಜ್ ಹಾಗೂ ಕೋಶಾಧಿಕಾರಿ ಸದಾನಂದ ಕೋಡಿಯಡ್ಕ ಉಪಸ್ಥಿತರಿದ್ದರು.

ಗೌರವ ಸಲಹೆಗಾರ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಕ್ಷಿತ್ ಮಜಿ ವಂದಿಸಿದರು. ಸಂತೋಷ್  ಕೋಟ್ಯಾನ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Leave a Comment