ಬಂಟ್ವಾಳ: ಮಾವಿನಕಟ್ಟೆಯ ಬಿ.ಎನ್.ಎಸ್. ಕಾಂಪ್ಲೆಕ್ಸ್ನಲ್ಲಿ ಶಕುಂತಳಾ ಬಾಚೆಕೆರೆ ಅವರು ಮೂರು ವರ್ಷಗಳಿಂದ ಗೃಹಲಕ್ಷ್ಮೀ ಯೋಜನೆಯಡಿ ಪಡೆದ ಹಣವನ್ನು ಒಟ್ಟುಗೂಡಿಸಿ ಆರಂಭಿಸಿರುವ ಶ್ರೀ ದುರ್ಗಾ ಗೃಹಲಕ್ಷ್ಮೀ ವಸ್ತ್ರ ಮಳಿಗೆಯನ್ನು ಕರ್ನಾಟಕ ಸರಕಾರದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಹಾಗೂ ಜವಾಹರ್ ಬಾಲ್ ಮಂಚ್ನ ಜಿಲ್ಲಾ ಅಧ್ಯಕ್ಷೆ ಶೈಲಜಾ ರಾಜೇಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೈಲಜಾ ರಾಜೇಶ್, ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸದುಪಯೋಗಪಡಿಸಿಕೊಂಡು ಶಕುಂತಳಾ ಅವರು ಸ್ವಂತ ಉದ್ಯಮ ಆರಂಭಿಸಿರುವುದು ಶ್ಲಾಘನೀಯ. ಮಹಿಳೆಯರು ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು. ಶಕುಂತಳಾ ಅವರ ಪ್ರಯತ್ನ ಇತರ ಮಹಿಳೆಯರಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದುರ್ಗಾಪರಮೇಶ್ವರಿ
ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚೆಕೆರೆ ಅವರು ಹೊಲಿಗೆ ಯಂತ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಪತ್ ಕುಮಾರ್, ಪುರುಷೋತ್ತಮ ಕಾಯರ್ ಮಲ್ಕೆ, ಚಂದ್ರಶೆಟ್ಟಿ ಹೊಳ್ಳರಗುತ್ತು, ಶಿಶು ಸಂರಕ್ಷಣಾಧಿಕಾರಿ ಮಮ್ತಾಜ್ ಹಾಗೂ ಬಂಟ್ವಾಳ ಗೃಹಲಕ್ಷ್ಮೀ ಯೋಜನೆಯ ಅಧ್ಯಕ್ಷೆ ಜಯಂತಿ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಉದ್ಯಮ ಆರಂಭಿಸಿರುವ ಶಕುಂತಳಾ ಬಾಚೆಕೆರೆ ಅವರಿಗೆ ಶುಭ ಹಾರೈಸಿದರು.













