ನವದೆಹಲಿ : ವೃದ್ಧರು, ವಿಧವೆಯರು ಮತ್ತು ವಿಕಲಚೇತನರಿಗೆ ಪಿಂಚಣಿ ನೀಡುವ ‘ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ’ದ (ಎನ್ಎಸ್ಎಪಿ) ವಿವಿಧ ಯೋಜನೆಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿಗೆ ಕೊಕ್ ನೀಡಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ, ಯೋಜನೆಯ ಅವಧಿ ಮತ್ತು ಪಿಂಚಣಿ ನಿಯಮಗಳಲ್ಲಿಯೂ ಕೆಲ ಪರಿಷ್ಕರಣೆ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ‘ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ’ಯನ್ನು ‘ಪ್ರಧಾನಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ’ ಎಂದು ಮರುನಾಮಕರಣ ಮಾಡಲು ಹಾಗೂ ಯೋಜನೆಯಡಿ ಲಭ್ಯವಿರುವ ಹಲವು ಪಿಂಚಣಿ ಯೋಜನೆಗಳ ಹೆಸರುಗಳನ್ನು ಬದಲಾಯಿಸಲು ಅನುಮೋದನೆ ನೀಡಲಾಗಿದೆ.
ಮೂರು ಪಿಂಚಣಿಗಳಿಗೆ ಇಂದಿರಾ ಹೆಸರಿಗೆ ಕೊಕ್:
‘ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ’ಯನ್ನು ‘ಪ್ರಧಾನಮಂತ್ರಿ ವೃದ್ಧಾಪ್ಯ ಪಿಂಚಣಿ ಯೋಜನೆ’ ಎಂದು, ‘ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ’ಯನ್ನು ‘ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ’ ಎಂದು ಮತ್ತು ‘ಇಂದಿರಾ ಗಾಂಧಿ ರಾಷ್ಟ್ರೀಯ ವಿಕಲಚೇತನರ ಪಿಂಚಣಿ ಯೋಜನೆ’ಯನ್ನು ‘ಪ್ರಧಾನಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ. ರಾಷ್ಟ್ರೀಯ ಕುಟುಂಬ ಧನಸಹಾಯ ಯೋಜನೆಯನ್ನು ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ ಎಂದು ಹೆಸರಿಸಲಾಗಿದೆ.
ಪಿಂಚಣಿ ಯೋಜನೆ 5 ವರ್ಷ ವಿಸ್ತರಣೆ:
ಇದೇ ವೇಳೆ,
ಕೇಂದ್ರ ಸಚಿವ ಸಂಪುಟವು ಈ ಸಾಮಾಜಿಕ ಭದ್ರತಾ ಯೋಜನೆಯನ್ನು 2026-27ರಿಂದ 2030-31ರವರೆಗಿನ ಮುಂದಿನ 5 ವರ್ಷಗಳ ಕಾಲ ಮುಂದುವರಿಸಲು 53,428 ಕೋಟಿ ರು. ಅನುದಾನವನ್ನು ಅನುಮೋದಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸುಮಾರು 3.20 ಕೋಟಿ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ.
ಪಿಂಚಣಿ ನಿಯಮ ಸಡಿಲಿಕೆ:
ಪರಿಷ್ಕೃತ ನಿಯಮಗಳ ಅಡಿಯಲ್ಲಿ, ಅಂಗವೈಕಲ್ಯ ಪಿಂಚಣಿ ಯೋಜನೆಯಡಿ ಮಾಸಿಕ ಸಹಾಯಧನವು 79 ವರ್ಷದವರೆಗಿನ ಫಲಾನುಭವಿಗಳಿಗೆ 375 ರು. ಹಾಗೂ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 625 ರು. ಆಗಿರುತ್ತದೆ. ಈ ಹಿಂದೆ ವಿಕಲಚೇತನ ಪಿಂಚಣಿ ಪಡೆಯಲು ಕನಿಷ್ಠ ಶೇ.80ರಷ್ಟು ಅಂಗವೈಕಲ್ಯ ಇರಬೇಕಾಗಿತ್ತು. ಈಗ ಈ ಮಿತಿಯನ್ನು ಶೇ.40ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಶೇ.40ರಷ್ಟು ವಿಕಲ್ಯ ಹೊಂದಿರುವವರೂ ಪಿಂಚಣಿಗೆ ಅರ್ಹರಾಗಲಿದ್ದಾರೆ. ಇವರ ಪಿಂಚಣಿಗೆ ಇದ್ದ ಕನಿಷ್ಠ ವಯಸ್ಸಿನ ಅರ್ಹತಾ ಮಾನದಂಡವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.











