ಬಂಟ್ವಾಳ: ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಬಂಟ್ವಾಳ ಇದರ ಆಶ್ರಯದಲ್ಲಿ ಅ. 17ರಂದು ಶನಿವಾರದಿಂದ ಬೃಹತ್ "ಶನಿವಾರದ ಸಂತೆ" ಬಿ ಸಿ ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಪುನರಾರಂಭಗೊಳ್ಳಲಿದೆ ಎಂದು ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಹೇಳಿದರು.
ಅವರು ಮಂಗಳವಾರ ಶನಿವಾರ ಸಂತೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ಅ. 17ರಂದು ಬೆಳಗ್ಗೆ ಶನಿವಾರ ಸಂತೆ ಆರಂಭವಾಗಲಿದ್ದು, ಸಾರ್ವಜನಿಕರು, ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.ಅಂದು ಬೆಳಗ್ಗೆ 7.30ಕ್ಕೆ ಗಣಹೋಮ, 10.30ರಿಂದ 11 ಗಂಟೆಯವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ,ಅರೋಗ್ಯ ಸಚಿವ ಯು ಟಿ ಖಾದರ್ ಉದ್ಘಾಟಿಸಲಿದ್ದು, ಸಂಸದ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ ಸಹಿತ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದು ಬೆಳಗ್ಗೆ 11 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಮಧ್ಯಾಹ್ನ
3ರಿಂದ ಸಂಜೆ 5 ಗಂಟೆಯವರೆಗೆ ‘ಜಾಂಬವತಿ ಪರಿಣಯ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಉದಯಕುಮಾರ್ ಮದ್ದ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂತೆ ನಡೆಯುವ ಸ್ಥಳದಲ್ಲಿ ವಿವಿಧ ವಸ್ತುಗಳ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂತೆಯ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮೋಹನ ಸಾಲ್ಯಾನ್, ಶ್ಯಾಮಲಾ ಮೋಹನ ಸಾಲ್ಯಾನ್,ಉಪಾಧ್ಯಕ್ಷ ಮಂಜುನಾಥ ರೈ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್, ನಿರ್ದೇಶಕರಾದ ಗಜೇಂದ್ರ ಪ್ರಭು,ಬಟ್ಯಪ್ಪ ಶೆಟ್ಟಿ, ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ರವೀಂದ್ರ, ಲೋಕೇಶ್ ಸುವರ್ಣ ಉಪಸ್ಥಿತರಿದ್ದರು.












