ಬಂಟ್ವಾಳ :ರಾಷ್ಟ್ರೀಯ ಚಿಂತನೆಯೊಂದಿಗೆ ಧಾರ್ಮಿಕ ಹಾಗೂ ಸಂಸ್ಕಾರಭರಿತ ಕಾರ್ಯಕ್ರಮಗಳ ಮೂಲಕ ತುಂಬೆಯ ಶಾರದೋತ್ಸವ ಸಮಿತಿ ಉತ್ತಮ ಕಾರ್ಯ ಮಾಡುತ್ತಿದೆ. ಜ್ಞಾನ ಮತ್ತು ಭಕ್ತಿಯ ಸಂಕೇತವಾದ ಶಾರದಾ ಮಾತೆಯ ಆರಾಧನೆಯಿಂದ ಜ್ಞಾನಾರ್ಜನೆಯೊಂದಿಗೆ ಭಕ್ತಿ ಮತ್ತು ಸಂಸ್ಕಾರ ವೃದ್ಧಿಯಾಗುತ್ತದೆ, ಧಾರ್ಮಿಕ ಆಚರಣೆಗಳು ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಮ್ಮ ದೇಶವು ಜಗದ್ಗುರುವಾಗಿ ವಿಶ್ವಕ್ಕೆ ಜ್ಞಾನ, ಶಾಂತಿ ಮತ್ತು ಸಂಸ್ಕಾರದ ಸಂದೇಶ ಸಾರುವಂತಾಗಲು ಶಾರದಾ ಮಾತೆಯ ಆಶೀರ್ವಾದ ಸದಾ ಇರಲಿ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ ) ತುಂಬೆ ಶ್ರೀರಾಮನಗರದ ರಾಮಲ್ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ 2ದಿನಗಳ ಕಾಲ ನಡೆದ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಮಾತನಾಡಿ, ವಿದ್ಯೆಯನ್ನು ಕರುಣಿಸುವ ಮಾತೆ ಶಾರದಾದೇವಿಯ ಆಶೀರ್ವಾದದಿಂದ ಜ್ಞಾನ ಮತ್ತು ಸಂಸ್ಕಾರ ವೃದ್ಧಿಯಾಗಲಿ ಎಂದರು.
ದ ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೊಂಡಾಲ ಚಿತ್ತಾರರಂಜನ್ ಶೆಟ್ಟಿ ಮಾತನಾಡಿ ಮನೆಯ ತಾಯಿ, ಪತ್ನಿ ಹಾಗೂ ಸಹೋದರಿಯರಿಗೆ ಗೌರವದ ಸ್ಥಾನಮಾನ ನೀಡಿ, ಮಾತೆಯರನ್ನು ಪ್ರೀತಿಯಿಂದ ಕಾಣುವಾಗಲೇ ನಾವು ಶಾರದಾ ಮಾತೆಗೆ ನಿಜವಾದ ಗೌರವ ಸಲ್ಲಿಸಿದಂತಾ ಗುತ್ತದೆ ಎಂದರು.
ಉಪನ್ಯಾಸಕಿ ರೇಷ್ಮಾ ವಿನಯ್ ಮಾತನಾಡಿ, ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಭಕ್ತಿ, ಸಂಸ್ಕಾರ ಮತ್ತು ಮಾನವೀಯ
ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳನ್ನು ಭಕ್ತಿಯ ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಟೈಲರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸುರೇಶ್ ಕುಲಾಲ್,ಬಂಟ್ವಾಳ ತಾಲೂಕು ಕೇಟರಿಂಗ್ ಮಾಲಕರ ಸಂಘದ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಮಾಣಿ,ಮೆಸ್ಕಾಂ ಸಹಾಯಕ ಇಂಜಿನಿಯರ್ ದೇವಿಕಿರಣ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ನಿಸರ್ಗ, ಪ್ರ ಕಾರ್ಯದರ್ಶಿ ಜಗನ್ನಾಥ ಸಾಲಿಯಾನ್,ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪ್ರ ಕಾರ್ಯದರ್ಶಿ ದಿವಾಕರ ಪೇರ್ಲ ಬೈಲ್, ಕೋಶಾಧಿಕಾರಿ ರಾಘವ ಬಂಗೇರ ಪೇರ್ಲ ಬೈಲ್, ಶೋಭಾ ಗೋಪಾಲ್ ಮೈಂದನ್, ಭವಾನಿ ಸೋಮಪ್ಪ ಕೋಟ್ಯಾನ್ ಸದಾನಂದ ಕೋಡಿಯಡ್ಕ,ಮಮತಾ ಅರುಣ್,ಪ್ರಿಯ ಸತೀಶ್ ಉಪಸ್ಥಿತರಿದ್ದರು.
ಸಂತೋಷ್ ಕೋಟ್ಯಾನ್ ತುಂಬೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ರಮಾನಾಥ ಅಮೀನ್ ಬಹುಮಾನಿತರ ಪಟ್ಟಿ ವಾಚಿಸಿದರು, ಯೋಗೀಶ್ ಬೊಳ್ಳಾರಿ ಧನ್ಯವಾದವಿತ್ತು, ಯೋಗೀಶ್ ಕಜೆಕಂಡ ಕಾರ್ಯಕ್ರಮ ನಿರೂಪಿಸಿದರು.














