ವಿಶ್ವಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು; ಸರ್ಕಾರಗಳ ವಿರುದ್ಧ ಜನಾಕ್ರೋಶ

Coastal Bulletin
ವಿಶ್ವಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು; ಸರ್ಕಾರಗಳ ವಿರುದ್ಧ ಜನಾಕ್ರೋಶ

ನವದೆಹಲಿ: ಸರ್ಕಾರ ಅಥವಾ ವ್ಯವಸ್ಥೆಗಳನ್ನು ಕದಲಿಸಲು ಜನಾಂದೋಲನ, ಪ್ರತಿಭಟನೆಗಳು ಪ್ರಮುಖ ಅಸ್ತ್ರಗಳಾಗಿವೆ. ಇತ್ತೀಚೆಗೆ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿ ಈ ಪ್ರತಿಭಟನೆಗಳು ನಡೆದಿರುವುದುಂಟು. ಐತಿಹಾಸಿಕವಾಗಿ ಇರಾನ್, ಫ್ರಾನ್ಸ್ ಇತ್ಯಾದಿ ಕಡೆ ಹಲವು ಕ್ರಾಂತಿ, ದಂಗೆ, ಪ್ರತಿಭಟನೆಗಳು ನಡೆದಿವೆ. ಕೆಲ ಸಕಾರಣಗಳಿವೆ, ಕೆಲ ವಿಕಾರಣಗಳಿವೆ, ಕೆಲ ಕಾಣದ ಕೈಗಳ ಸಂಚುಗಳಿವೆ. ಭಾರತದಲ್ಲೂ ಐದಾರು ವರ್ಷಗಳಿಂದ ಒಂದಲ್ಲ ಒಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈಗ ಯೂರೋಪ್ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಹಲವು ದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಜನರ ಪ್ರತಿಭಟನೆಗಳು ನಡೆಯುತ್ತಿವೆ. ಫ್ರಾನ್ಸ್ ದೇಶದಲ್ಲಂತೂ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಟೌನ್ ಹಾಲ್ ಕಟ್ಟಡಕ್ಕೇ ಜನರು ಬೆಂಕಿ ಇಟ್ಟಿದ್ದಾರೆ.

ಫ್ರಾನ್ಸ್ ದೇಶದಲ್ಲಿ ಭಾರೀ ಹಿಂಸಾಚಾರ…

ವಿದ್ಯಾರ್ಥಿಗಳಿಂದ ಆರಂಭವಾದ ಪ್ರತಿಭಟನೆಯ ಕಿಡಿ ಇವತ್ತು ತೀವ್ರತರದ ಹಿಂಸಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ. ಶಿಕ್ಷಣಕ್ಕೆ ಫಂಡಿಂಗ್ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯ ಬೇಡಿಕೆ ಇಟ್ಟು ಸ್ಥಳೀಯವಾಗಿ ಕಳೆದ ತಿಂಗಳು ಪ್ರತಿಭಟನೆ ಆರಂಭಿಸಿದ್ದರು. ಅದು ಹೆಚ್ಚಿನ ಪ್ರದೇಶಗಳಿಗೆ ವ್ಯಾಪಿಸಿದೆ. ಶಾಲೆಗಳ ಸ್ಥಿತಿ ಸುಧಾರಿಸಬೇಕು ಎನ್ನುವ ಬೇಡಿಕೆಯೂ ಸೇರಿಕೊಂಡಿತು. ಇದರ ಜೊತೆಗೆ, ಹಣದುಬ್ಬರ ಅಸಮಾಧಾನವೂ ಸೇರಿಕೊಂಡು ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದೆ.

ಪ್ಯಾರಿಸ್ನ ಟೌನ್ ಹಾಲ್ ಕಟ್ಟಡವನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ. ಏಳು ಕೋಟಿ ಜನಸಂಖ್ಯೆಯ ಫ್ರಾನ್ಸ್ನಲ್ಲಿ ಐದೂವರೆ ಲಕ್ಷ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಅಲ್ಲಿಯ ಸರ್ಕಾರವೇ ಮಾಹಿತಿ ನೀಡಿದೆ.

ಬೆಲ್ಜಿಯಂನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಕಿಡಿ

ಯೂರೋಪ್ನ ಶ್ರೀಮಂತ ದೇಶವಾಗಿರುವ ಬೆಲ್ಜಿಯಂನಲ್ಲಿ ಬೆಲೆ ಏರಿಕೆ ಆಗುತ್ತಿರುವುದು ಜನರನ್ನು ಬೀದಿಗಿಳಿಯುವಂತೆ ಮಾಡಿದೆ. ಕುತೂಹಲವೆಂದರೆ, ಇಲ್ಲಿಯೂ ಪ್ರತಿಭಟನೆಯ ಕಿಡಿ ಹಾಕಿದ್ದು ವಿದ್ಯಾರ್ಥಿಗಳೇ. ಉನ್ನತ ಶಿಕ್ಷಣ, ಯೂನಿವರ್ಸಿಟಿ ನೊಂದಣಿ ಶುಲ್ಕ ಪಾವತಿಸಲು ನಿರಾಕರಿಸಿದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮೊದಲಿಟ್ಟರು. ಆ ಬಳಿಕ ಜನಸಾಮಾನ್ಯರೂ ಕೂಡ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಪೋರ್ಚುಗಲ್ನಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಪೋರ್ಚುಗಲ್ ದೇಶದಲ್ಲಿ ಜೀವನ ವೆಚ್ಚ ಹೆಚ್ಚುತ್ತಿದೆ. ವೇತನ ಕಡಿಮೆ ಇದೆ. ವಸತಿ ಸೌಲಭ್ಯ ದುಬಾರಿ ಇದೆ. ಸ್ವಂತ ಮನೆ ಹೊಂದಲು ಆಗುತ್ತಿಲ್ಲ. ಬಾಡಿಗೆಯೂ ದುಬಾರಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ,

ಇದು ತೀವ್ರತರದ ಪ್ರತಿಭಟನೆಯಾಗಿಲ್ಲ.

ಇಟಲಿಯಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಇಟಲಿಯಲ್ಲಿ ಕಾರ್ಮಿಕರ ವೇತನ ಏರಿಕೆ ಆಗುತ್ತಿಲ್ಲದಿರುವುದು, ಹಣದುಬ್ಬರ ಏರುತ್ತಿರುವುದು ಜನಸಾಮಾನ್ಯರ ಪ್ರತಿಭಟನೆಗೆ ಕಾರಣವಾಗಿದೆ. ಪೋರ್ಚುಗಲ್ನಂತೆ ಇಲ್ಲಿಯೂ ಹೆಚ್ಚಿನ ತೀವ್ರತೆಯಲ್ಲಿ ಗಲಾಟೆಗಳಾಗಿಲ್ಲ.

ಆಲ್ಬೇನಿಯಾದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಯೂರೋಪ್ನ ಆಲ್ಬೇನಿಯಾ ದೇಶದಲ್ಲಿ ಯೂನಿವರ್ಸಿಟಿಗಳು ಕೆಟ್ಟ ಸ್ಥಿತಿಯಲ್ಲಿವೆ, ಶಿಕ್ಷಣ ವೆಚ್ಚ ದುಬಾರಿ ಇದೆ, ಪದವಿ ಬಳಿಕ ಉದ್ಯೋಗಾವಕಾಶ ಕಡಿಮೆ ಇದೆ, ಹಣಕಾಸು ನೆರವಿನ ವ್ಯವಸ್ಥೆ ಇಲ್ಲ ಇತ್ಯಾದಿ ನ್ಯೂನತೆಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಪ್ರತಿಭಟಿಸುತ್ತಿದೆ. ಕೆಲವೊಮ್ಮೆ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದುಂಟು.

ಟರ್ಕಿಯಲ್ಲಿ ಕಾರ್ಮಿಕರ ಪ್ರತಿಭಟನೆ

ಯೂರೋಪ್ನ ಟರ್ಕಿಯಲ್ಲಿ ಜೀವನ ವೆಚ್ಚ ಹೆಚ್ಚಾಗಿದೆ. ನಿವೃತ್ತರಿಗೆ ಸರಿಯಾದ ಪಿಂಚಣಿ ಸಿಗುತ್ತಿಲ್ಲ ಎಂದು ಆರೋಪಿಸಿ ನಿವೃತ್ತರು ಮತ್ತು ಕಾರ್ಮಿಕ ಸಂಘಟನೆಗಳು ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಟ್ರಂಪ್ ವಿರುದ್ಧ ನೋ ಕಿಂಗ್ಸ್ ಪ್ರತಿಭಟನೆ

ಅಮೆರಿಕದಲ್ಲಿ ಅಲ್ಲಲ್ಲಿ ಟ್ರಂಪ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ‘ನೋ ಕಿಂಗ್ಸ್’ ನೆಟ್ವರ್ಕ್ ವತಿಯಿಂದ ಅಮೆರಿಕಾದ್ಯಂತ ಹಲವು ನಗರಗಳಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಟ್ರಂಪ್ ಸರ್ಕಾರದ ಟ್ಯಾರಿಫ್ ನೀತಿ ಇತ್ಯಾದಿ ಕ್ರಮಗಳ ವಿರುದ್ಧ ಜನಾಕ್ರೋಶ ಇದಾಗಿದೆ.

ಅರ್ಜೆಂಟೀನಾದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರಿಂದ ಪ್ರತಿಭಟನೆ

ದಕ್ಷಿಣ ಅಮೆರಿಕ ಖಂಡದ ಅರ್ಜೆಂಟೀನಾ ದೇಶದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸರಿಯಾಗಿ ವೆಚ್ಚ ಮಾಡುತ್ತಿಲ್ಲ ಎಂದು ಯೂನಿವರ್ಸಿಟಿಯ ಶಿಕ್ಷಕರು, ವಿದ್ಯಾರ್ಥಿಗಳು ಅಸಂತುಷ್ಟಗೊಂಡಿದ್ದಾರೆ. ಕಾರ್ಮಿಕ ಸಮುದಾಯವೂ ಕೂಡ ಈ ಪ್ರತಿಭಟನೆಗಳಿಗೆ ಕೈಜೋಡಿಸಿದೆ.

Leave a Comment