ನ್ಯೂಯಾರ್ಕ್: ಭಾರತದಲ್ಲಿ ವಿವಿಧ ಧರ್ಮಗಳು, ನಂಬಿಕೆಗಳು ಹಾಗೂ ಜೀವನ ಪದ್ಧತಿಗಳನ್ನ ಗೌರವಿಸುವುದೇ ದೇಶದ ಶಕ್ತಿ. ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆ ಮುಸ್ಲಿಮರನ್ನ ಭಾರತದಿಂದ ಹೊರಗಿಡುವುದನ್ನ ಸೂಚಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ತಿಳಿವಳಿಕೆ ನೀಡಿದರು.
ನ್ಯೂಯಾರ್ಕ್‌ನಲ್ಲಿ ಶನಿವಾರ (ಆ.29) ನಡೆದ ‘ಒನ್ ವರ್ಲ್ಡ್, ಒನ್ ಹ್ಯೂಮ್ಯಾನಿಟಿ’ (One World, One Humanity) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವೈವಿಧ್ಯತೆಯ ನಡುವೆಯೂ ಮಾನವೀಯ ಏಕತೆಯನ್ನ ಕಾಪಾಡುವುದು ಭಾರತದ ಸಾಂಪ್ರದಾಯಿಕ ದೃಷ್ಟಿಕೋನವಾಗಿದೆ ಎಂದು ಹೇಳಿದರು.
2018 ರಲ್ಲಿ ಕೆಲ ಮುಸ್ಲಿಂ ಸಮುದಾಯದ (Muslim Community) ಸದಸ್ಯರು ನನ್ನನ್ನ ಭೇಟಿಯಾಗಿ, ಆರ್‌ಎಸ್‌ಎಸ್ ಪ್ರತಿಪಾದಿಸುವ ‘ಹಿಂದೂ ರಾಷ್ಟ್ರ’ ಎಂದರೆ ಭಾರತದಿಂದ ಮುಸ್ಲಿಮರನ್ನ ಹೊರಹಾಕಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದರು. ಆಗ ತಾವು ನೀಡಿದ್ದ ಉತ್ತರವನ್ನು ಭಾಗವತ್ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.
ʻಇಲ್ಲ, ಅದು ಹಿಂದೂತ್ವವಲ್ಲ. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಆತ ಹಿಂದೂ ಆಗಿರಲಾರ. ನೀವು ನಿಮ್ಮನ್ನ ಹಿಂದೂ ಎಂದು ಕರೆದುಕೊಳ್ಳಬೇಕಾದ್ರೆ, ಎಲ್ಲ ಮಾರ್ಗಗಳೂ ಒಂದೇ ದೇವರತ್ತ ಕರೆದೊಯ್ಯುತ್ತವೆ ಎಂಬುದನ್ನು ನಂಬಬೇಕುʼʼ ಎಂದು ಭಾಗವತ್ ಹೇಳಿದರು.
‘ಸತ್ಯ ಒಂದೇ, ಧರ್ಮಗಳು ವಿಭಿನ್ನ’
ಭಾರತದ ಸಾಂಪ್ರದಾಯಿಕ ಚಿಂತನೆ ಧರ್ಮಗಳು ವಿಭಿನ್ನವಾಗಿರಬಹುದು, ಆದರೆ ಮಾನವೀಯತೆ ಒಂದೇ. ಸತ್ಯ ಒಂದೇ ಮತ್ತು ಆ ಸತ್ಯದಿಂದಲೇ ಮಾನವೀಯತೆ ರೂಪುಗೊಂಡಿದೆ ಎಂಬುದನ್ನ ನಮ್ಮ ಸಮಾಜ ಸಾಂಪ್ರದಾಯಿಕವಾಗಿ ಹೇಳಿಕೊಂಡು ಬಂದಿದೆ. ಇಂದು ಧರ್ಮಗಳನ್ನ ಬಹುತೇಕ ಆಚರಣೆಗಳು ಹಾಗೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಗುರುತಿಸಲಾಗುತ್ತಿದೆ. ಆಚರಣೆಗಳು ಮತ್ತು ಧಾರ್ಮಿಕ ಶಿಸ್ತುಗಳಿಗೆ ತಮ್ಮದೇ ಆದ
ಮಹತ್ವವಿದ್ದರೂ, ಧರ್ಮದ ಅಂತಿಮ ಉದ್ದೇಶ ಸತ್ಯವನ್ನು ಅರಸುವುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದುವರಿದು.. ʻನಾನು ಬೆಳಕಿನತ್ತ ಬೆರಳು ತೋರಿಸಿದ್ರೆ, ನೀವು ಮೊದಲು ನನ್ನ ಬೆರಳನ್ನ ನೋಡುತ್ತೀರಿ, ನಂತರ ಬೆಳಕನ್ನು ನೋಡಬೇಕು. ಆದರೆ ನೀವು ನನ್ನ ಬೆರಳನ್ನೇ ನೋಡುತ್ತಾ ಕುಳಿತರೆ, ಎಂದಿಗೂ ಬೆಳಕನ್ನ ಕಾಣಲು ಸಾಧ್ಯವಿಲ್ಲ. ಹೀಗೆಯೇ ಜನರು ವಿಭಿನ್ನ ಧಾರ್ಮಿಕ ಮಾರ್ಗಗಳನ್ನ ಅನುಸರಿಸಬಹುದು. ಆದರೆ ಅಂತಿಮವಾಗಿ ಎಲ್ಲ ಮಾರ್ಗಗಳೂ ಒಂದೇ ದೈವಿಕ ಸತ್ಯದತ್ತ ಕರೆದೊಯ್ಯುತ್ತವೆ ಎಂಬುದು ಭಾರತದ ದೃಷ್ಟಿಕೋನ ಎಂದು ಭಾಗವತ್ ಹೇಳಿದರು.
‘ವೈವಿಧ್ಯತೆಯನ್ನು ರಕ್ಷಿಸಬೇಕು’
ಭಾರತದ ಇತಿಹಾಸದಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಜನರಿಗೆ ಆಶ್ರಯ ನೀಡಿದ ಪರಂಪರೆ ಇದೆ. ವಿದೇಶಿ ಆಕ್ರಮಣಗಳಿಂದ ದೇಶ ಹಲವು ವಿಷಯಗಳನ್ನು ಕಳೆದುಕೊಂಡಿದ್ದರೂ, ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವ ಭಾರತದ ಪರಂಪರೆ ಉಳಿದುಕೊಂಡಿದೆ. ನಮ್ಮ ಸಮಾಜ ಮತ್ತು ದೇಶ ವಿದೇಶಿ ಆಕ್ರಮಣಗಳಿಗೆ ಗುರಿಯಾಯಿತು. ಅನೇಕ ಸಂಗತಿಗಳನ್ನು ನಾವು ಕಳೆದುಕೊಂಡೆವು. ಆದರೆ ಆ ಪರಂಪರೆ ಇನ್ನೂ ಅಸ್ತಿತ್ವದಲ್ಲಿದೆ. ‘ಒಂದು ಜಗತ್ತು, ಒಂದು ಮಾನವೀಯತೆ’ ಎಂಬ ಸಂದೇಶವನ್ನು ಅದು ಸಾಮಾನ್ಯ ಜನರಿಗೂ ನೀಡುತ್ತದೆ ಎಂದು ಶ್ಲಾಘಿಸಿದರು.
ಆದ್ದರಿಂದ ವೈವಿಧ್ಯತೆ ರಕ್ಷಿಸುವುದು ಮತ್ತು ಗೌರವಿಸುವುದು ಅಗತ್ಯ ಎಂದು ಪ್ರತಿಪಾದಿಸಿದ ಅವರು, ವಿಭಿನ್ನತೆಯ ನಡುವೆಯೂ ಏಕತೆಯಿಂದ ಬದುಕುವುದು ಪ್ರಕೃತಿಯ ವಾಸ್ತವ ಮತ್ತು ಸತ್ಯವಾಗಿದೆ ಎಂದು ಹೇಳಿದರು
















