ನವದೆಹಲಿ: ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರದ ಜನರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ (PM Modi), ಝೆನ್-ಜೀಗಳಿಗೆ ಬಂಬಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಬರುವ ವರ್ಷದಲ್ಲಿ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಅಲ್ಲದೇ ಭಾರತದ (India) ಅಭಿವೃದ್ಧಿಯ ಪಯಣದಲ್ಲಿ ಯುವಜನರನ್ನು ಕೇಂದ್ರಬಿಂದುವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಯುವ ಪೀಳಿಗೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಯುವಶಕ್ತಿ, ಮಹಿಳೆಯರು, ರೈತರು ಹಾಗೂ ಕಾರ್ಮಿಕರ ಸಹಕಾರದೊಂದಿಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಬಹುದು. ಭಾರತದ ಕನಸುಗಳನ್ನು ನನಸಾಗಿಸಲು Gen Z ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸುಧಾರಣೆಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಅಗತ್ಯವಿದೆ. ನನ್ನ ದೇಶದ ಯುವಜನರ ಮೇಲೆ, ನನ್ನ ದೇಶದ ತಾಯಂದಿರು ಮತ್ತು ಸಹೋದರಿಯರ ಮೇಲೆ, ನನ್ನ ದೇಶದ ರೈತರ (Farmers) ಮೇಲೆ ಹಾಗೂ ನನ್ನ ದೇಶದ ಕಾರ್ಮಿಕರ ಮೇಲೆ ನನಗೆ ನಂಬಿಕೆಯಿದೆ. ನಾವೆಲ್ಲರೂ ಸೇರಿ ಈ ಕನಸನ್ನು
ನನಸಾಗಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷವಾಗಿ ಗಮನ ಸೆಳೆಯಿತು. ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸಲಾಯಿತು.
ಧ್ವಜಾರೋಹಣದ ಬಳಿಕ ಸೇನಾ ಬ್ಯಾಂಡ್ ‘ವಂದೇ ಮಾತರಂ’ ಗೀತೆಯನ್ನು ನುಡಿಸಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಗೀತೆಯನ್ನು ಹಾಡಿದರು. ಬಳಿಕ ರಾಷ್ಟ್ರಗೀತೆ ಮೊಳಗಿತು.
ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಿದ್ದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಒಟ್ಟು 2,500 ಬಾಲಕ ಮತ್ತು ಬಾಲಕಿಯರ ಕ್ಯಾಡೆಟ್‌ಗಳು, ‘ಮೈ ಭಾರತ್’ ಸ್ವಯಂಸೇವಕರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರು ಜ್ಞಾನಪಥದಲ್ಲಿ ಕುಳಿತು ‘ವಂದೇ ಮಾತರಂ’ ಎಂಬ ಪದದ ಆಕಾರವನ್ನು ರೂಪಿಸುವ ಮೂಲಕ ಗಮನ ಸೆಳೆದರು.













