ವೃಂದಾವನ: ಉತ್ತರ ಪ್ರದೇಶದ ವೃಂದಾವನದಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಸಂತ ಪ್ರೇಮಾನಂದ ಮಹಾರಾಜ್ ಶಿಷ್ಯನ ಸಾವಿನ ರಹಸ್ಯ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಅವರ ರೂಂನಲ್ಲಿ ಪತ್ತೆಯಾದ ಗ್ರೈಂಡರ್ ಮಷಿನ್, ಗುಪ್ತಾಂಗ ಕಟ್ ಆಗಿದ್ದಿದ್ದು ಹಾಗೂ ಆಶ್ರಮದ 4ನೇ ಮಹಡಿಯಿಂದ ಜಿಗಿಯುವ ಸಿಸಿಟಿವಿ ದೃೃಶ್ಯಾವಳಿಗಳು ಈ ಪ್ರಕರಣದ ಸುತ್ತ ಅನುಮಾನಗಳನ್ನು ಹೆಚ್ಚಿಸಿವೆ. ಮೃತ ದೀಪಕ್ ಲೋಧಿ ಅಲಿಯಾಸ್ ರಸಿಕ್ ದುಲಾರಿ ಶರಣ್ ಅವರ ಸಾವನ್ನು ಪೊಲೀಸರು ಆತ್ಮಹತ್ಯೆ ಎಂದು ಪರಿಗಣಿಸಿದ್ದರೂ, ಅವರು ಕೆಳಗೆ ಬೀಳುವ ಮುನ್ನ ಕೊಠಡಿಯಲ್ಲಿ ಏನು ನಡೆಯಿತು? ಅವರ ಮೊಬೈಲ್‌ನಿಂದ ಡಿಲೀಟ್ ಆಗಿರುವ ವಾಟ್ಸಾಪ್ ಚಾಟ್‌ಗಳು, ವಿಡಿಯೋಗಳು ಮತ್ತು ಇತರ ಡೇಟಾಗಳಿಂದ ಈ ಸಾವಿನ ನಿಜಾಂಶ ಹೊರಬರಬಹುದೇ ಎಂಬ ಕೋನದಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸುಮಾರು 2 ವರ್ಷಗಳ ಹಿಂದೆ ಪ್ರೇಮಾನಂದ ಮಹಾರಾಜರಿಂದ ದೀಕ್ಷೆ ಪಡೆದು ರಸಿಕ್ ದುಲಾರಿ ಶರಣ್ ಎಂದು ಹೆಸರು ಪಡೆದಿದ್ದ ದೀಪಕ್ ಲೋಧಿ, ಶುಕ್ರವಾರ ಬೆಳಿಗ್ಗೆ ವೃಂದಾವನದ ‘ಗುರು ಕೃಪಾ ಕುಂಜ್ ಆಶ್ರಮ’ದ 4ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದರು. ಶುಕ್ರವಾರ ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಈ ಘಟನೆ ಸಂಭವಿಸಿತ್ತು.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಸಿಕ್ ದುಲಾರಿ ಶರಣ್ ಬೆಳಿಗ್ಗೆ 10.25ರ ಸುಮಾರಿಗೆ ತಮ್ಮ ಕೊಠಡಿಯಿಂದ ಹೊರಬಂದಿದ್ದರು. ಅವರ ಉಡುಪಿನ ಮೇಲೆ ರಕ್ತದ ಕಲೆಗಳು ಎದ್ದು ಕಾಣುತ್ತಿದ್ದವು. ಅವರು ಕೊಠಡಿಯ ಹೊರಗೆ ಸ್ವಲ್ಪ ಸಮಯ ನಿಂತು, ನಂತರ 3ನೇ ಮಹಡಿಯಿಂದ 4ನೇ ಮಹಡಿಯ ಟೆರೇಸ್‌ಗೆ ತೆರಳಿದ್ದರು. ಟೆರೇಸ್‌ನಲ್ಲಿ ಕೆಲ ಕಾಲ ಕುಳಿತಿದ್ದ ಅವರು ಎದ್ದು ನಿಂತು ಬೆಳಿಗ್ಗೆ 10.36ರ ಸುಮಾರಿಗೆ ಟೆರೇಸ್‌ನಿಂದ ಕೆಳಗೆ ಹಾರಿದ್ದರು. ಅವರ ತಲೆ ಮತ್ತು ದೇಹಕ್ಕೆ ಗಂಭೀರ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಈ
ಸಂಪೂರ್ಣ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಸಿಸಿಟಿವಿ ಆಧಾರದಲ್ಲಿ ಇದು ಆತ್ಮಹತ್ಯೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದರೂ, ಅವರು ಜಿಗಿಯುವ ಮುನ್ನ ತಮ್ಮ ಕೊಠಡಿಯಲ್ಲಿ ಗುಪ್ತಾಂಗಕ್ಕೆ ಮಾಡಿಕೊಂಡ ಗಾಯದ ಹಿಂದಿನ ಕಾರಣವನ್ನು ಹುಡುಕುತ್ತಿದ್ದಾರೆ.
ತನಿಖೆಯ ವೇಳೆ ಶರಣ್ ವಾಸಿಸುತ್ತಿದ್ದ ಕೊಠಡಿಯಲ್ಲಿ ರಕ್ತಸಿಕ್ತ ಗ್ರೈಂಡರ್ ಯಂತ್ರ ಪತ್ತೆಯಾಗಿದೆ. ರಸಿಕ್ ದುಲಾರಿ ಶರಣ್ ಅವರ ಗುಪ್ತಾಂಗ ಕಟ್ ಆಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಆದರೆ, ಕಟ್ಟಡದಿಂದ ಜಿಗಿಯುವ ಮುನ್ನವೇ ಅವರು ಆ ರೀತಿಯ ಗಾಯವನ್ನು ಏಕೆ ಮಾಡಿಕೊಂಡರು ಎಂಬುದು ಇನ್ನೂ ನಿಗೂಢವಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅತಿಯಾದ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.
ಡಿಲೀಟ್ ಆದ ಚಾಟ್‌ಗಳು, ವಿಡಿಯೋಗಳ ಮೇಲೆ ಕಣ್ಣು:
ಪೊಲೀಸರು ಈಗ ರಸಿಕ್ ದುಲಾರಿ ಶರಣ್ ಅವರ ಡಿಜಿಟಲ್ ಹೆಜ್ಜೆಗುರುತುಗಳನ್ನು ತನಿಖೆ ಮಾಡುತ್ತಿದ್ದಾರೆ. ಅವರ ಮೊಬೈಲ್ ಫೋನ್‌ನಲ್ಲಿರುವ ಡೇಟಾವನ್ನು ಮರುಪಡೆಯಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾವಿಗೂ ಮುನ್ನ ಅವರು ಯಾವುದೇ ಫೋಟೋಗಳು, ವಿಡಿಯೋಗಳು ಅಥವಾ ಚಾಟ್‌ಗಳನ್ನು ಡಿಲೀಟ್ ಮಾಡಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ.











