ತುಂಬೆ ಪದವಿ ಪೂರ್ವ ಕಾಲೇಜು: ಕಾಲೇಜು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Coastal Bulletin
ತುಂಬೆ ಪದವಿ ಪೂರ್ವ ಕಾಲೇಜು: ಕಾಲೇಜು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಬಂಟ್ವಾಳ:  ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ.) ತುಂಬೆ ನಡೆಸುತ್ತಿರುವ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭ ಆ.13ರಂದು ಕಾಲೇಜಿನ ಶಬನಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕಿ ಶರ್ಮಿಳಾ ಮಾತನಾಡಿ, ವಿದ್ಯಾರ್ಥಿ ಸಂಸತ್ತು ಕಾಲೇಜಿನಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ, ಸಂಘಟನಾ ಕೌಶಲ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಆಯ್ಕೆಯಾದ ಪ್ರತಿನಿಧಿಗಳು ವಿದ್ಯಾರ್ಥಿಗಳ ಆಶೋತ್ತರಗಳಿಗೆ ಸ್ಪಂದಿಸಿ, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ವಿದ್ಯಾರ್ಥಿ ಸಂಸತ್ತಿನ ನಾಯಕರಿಗೆ ಪ್ರಮಾಣ ವಚನ ಬೋಧಿಸಿ, ವಿದ್ಯಾರ್ಥಿ ಜೀವನದಲ್ಲಿಯೇ ಜವಾಬ್ದಾರಿ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂಸತ್ತಿನ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ದಿನೇಶ್ ಶೆಟ್ಟಿ ಅಳಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದರ ಜೊತೆಗೆ, ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರಾಗಲು

ಅಗತ್ಯವಾದ ಅನುಭವವನ್ನು ನೀಡುತ್ತದೆ. ವಿದ್ಯಾರ್ಥಿಗಳು ಸಂಸತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಲೇಜಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಕೈಜೋಡಿಸಬೇಕು ಎಂದರು.

ಕಾಲೇಜಿನ ಕನ್ನಡ ಉಪನ್ಯಾಸಕ ಡಿ.ಬಿ. ಅಬ್ದುಲ್ ರಹಿಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಕವಿತಾ ಕೆ. ಹಾಗೂ ಸಂಸತ್ತಿನ ನಿರ್ದೇಶಕ ಮತ್ತು ಇತಿಹಾಸ ಉಪನ್ಯಾಸಕ ಶರತ್ ಆಳ್ವ ಹಾಗೂ ವಿದ್ಯಾರ್ಥಿ ಸಂಸತ್ತಿನ  ಅಧ್ಯಕ್ಷ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ನಿಹಾದ್ ಹಾಗೂ ವಿದ್ಯಾರ್ಥಿನಿ ಕಾರ್ಯದರ್ಶಿ ಫಾತಿಮತುಲ್ ಅಲೀಮಾ ಸನಾಮಾ , ವಿರೋಧ ಪಕ್ಷದ ನಾಯಕ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮೊಹಮ್ಮದ್  ಅಮೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸೌಹಾನ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ  ಡಿ.ಬಿ. ಖತಿಜತ್ ಶಕೀಲಾ ಸ್ವಾಗತಿಸಿ, ನಫೀಸಾ ಸಮರ್ ವಂದಿಸಿದರು.

ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸಹಕಾರದಿಂದ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Comment