ಬೆಂಗಳೂರು: ಮತದಾರರ ಪಟ್ಟಿಯಿಂದ (Voter List) ತಮ್ಮ ಹೆಸರು ಕೈಬಿಡಲಾಗಿದೆ ಎಂದು ವಿಡಿಯೋ ಮೂಲಕ ಆರೋಪ ಮಾಡಿದ್ದ ನಟ ಪ್ರಕಾಶ್ ರಾಜ್ (Prakash Raj) ಅವರ ಹೇಳಿಕೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ತಳ್ಳಿಹಾಕಿದ್ದು, ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಪ್ರಕಾಶ್ ರಾಜ್ ಅವರ ಆರೋಪವನ್ನು ಆಯುಕ್ತ ಜಗದೀಶ್ ಅವರು ಸುದೀರ್ಘ ಪರಿಶೀಲನೆ ನಡೆಸಿ ಹೇಳಿಕೆ ನೀಡಿದ್ದಾರೆ. ಪ್ರಕಾಶ್ ರಾಜ್ ಅವರು ತಮ್ಮ ನೋಂದಾಯಿತ ವಿಳಾಸದಲ್ಲಿ ವಾಸವಾಗಿರದ ಕಾರಣ ಚುನಾವಣಾ ಆಯೋಗದ (Election Commission) ನಿಯಮಗಳ ಪ್ರಕಾರ ಅವರ ಹೆಸರನ್ನು ‘ಸ್ಥಳಾಂತರಗೊಂಡಿದೆ’ ಎಂಬುದಾಗಿ ನಮೂದಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಹೇಳಿಕೆಯಲ್ಲಿ ಏನಿದೆ?
ಪ್ರಕಾಶ್ ರಾಜ್ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗಾರ್ಡನ್ ಅಪಾರ್ಟ್‌ಮೆಂಟ್ ವಿಳಾಸದಲ್ಲಿ ನೋಂದಣಿಯಾಗಿದ್ದರು. ಆದರೆ ಬೂತ್ ಮಟ್ಟದ ಅಧಿಕಾರಿ (BLO) ಪರಿಶೀಲನೆ ನಡೆಸಿದಾಗ, ಅವರು ಕಳೆದ 4 ವರ್ಷಗಳಿಂದ
ಆ ವಿಳಾಸದಲ್ಲಿ ವಾಸವಿಲ್ಲದಿರುವುದು ಹಾಗೂ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ.
ಅಪಾರ್ಟ್‌ಮೆಂಟ್ ಮಾಲೀಕರು ಮತ್ತು ಪ್ರಾಪರ್ಟಿ ಮ್ಯಾನೇಜರ್ ಅವರ ಹೇಳಿಕೆ ಹಾಗೂ ಮಹಜರು ಆಧಾರದ ಮೇಲೆ, ಭಾರತೀಯ ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅವರ ಹೆಸರನ್ನು ಸ್ಥಳಾಂತರಗೊಂಡಿದೆ (Shifted) ಎಂದು ಗುರುತಿಸಲಾಗಿದೆ.
ಪಾಲಿಕೆ ಅಧಿಕಾರಿಗಳು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅವರು ಪ್ರಸ್ತುತ ಅದೇ ಶಾಂತಿನಗರ ಕ್ಷೇತ್ರದ ಬೇರೊಂದು ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.
ಹೊಸ ವಿಳಾಸದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಿ.ಎಲ್.ಓ ಮೂಲಕ ನಮೂನೆ-6 (Form-6) ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದ್ದು, ಚುನಾವಣಾ ಆಯೋಗದ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
















