ಟೆಂಡರ್‌ಗಳಲ್ಲಿ 2%, 3%, 4% ಕಮಿಷನ್‌ ಕೇಳ್ತಿದ್ದಾರೆ – ವಿಜಯ್ ಸರ್ಕಾರದ ವಿರುದ್ಧ ಅಣ್ಣಾಮಲೈ ಭ್ರಷ್ಟಾಚಾರ ಬಾಂಬ್‌

Coastal Bulletin
ಟೆಂಡರ್‌ಗಳಲ್ಲಿ 2%, 3%, 4% ಕಮಿಷನ್‌ ಕೇಳ್ತಿದ್ದಾರೆ – ವಿಜಯ್ ಸರ್ಕಾರದ ವಿರುದ್ಧ ಅಣ್ಣಾಮಲೈ ಭ್ರಷ್ಟಾಚಾರ ಬಾಂಬ್‌

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್ ನೇತೃತ್ವದ ಸರ್ಕಾರದ (Vijay Govt) ವಿರುದ್ಧ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.

ಚೆನ್ನೈನಲ್ಲಿ ʻವೀ ದಿ ಲೀಡರ್ಸ್ʼ ಸಂಘಟನೆ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, ಕೆಲ ಸಚಿವರು ಸರ್ಕಾರಿ ಟೆಂಡರ್‌ಗಳಲ್ಲಿ ಗುತ್ತಿಗೆದಾರರಿಂದ 2% ನಿಂದ 4% ವರೆಗೆ ಕಮಿಷನ್‌ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ವಿಜಯ್ ಅವರು ಭ್ರಷ್ಟಾಚಾರ (Corruption) ವಿರುದ್ಧ ನಿಲುವು ಹೊಂದಿದ್ದಾರೆ ಎಂದು ಹೇಳುತ್ತಿದ್ದರೂ, ಅವರ ಸಂಪುಟದ ಕೆಲ ಸಚಿವರು ಗುತ್ತಿಗೆದಾರರಿಂದ ಕಿಕ್‌ಬ್ಯಾಕ್‌ ಪಡೆಯಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಭ್ರಷ್ಟಾಚಾರದ ವಿರುದ್ಧ ಇದ್ದಾರೆ ಎಂಬುದು ಸತ್ಯ. ಅದನ್ನು ನಾವು ನೋಡುತ್ತಿದ್ದೇವೆ. ಈ ಹಿಂದೆ ಪ್ರಮುಖ ಟೆಂಡರ್‌ಗಳಲ್ಲಿ ಕಿಕ್‌ಬ್ಯಾಕ್‌ ಪಡೆಯುತ್ತಿರಲಿಲ್ಲ. ಆದರೆ ಈಗ ಕೆಲ ಸಚಿವರು ಕಮಿಷನ್‌ ಕೇಳಲು ಆರಂಭಿಸಿದ್ದಾರೆ ಎಂದು ಬಾಂಬ್‌ ಸಿಡಿಸಿದ್ದಾರೆ.

ತಮ್ಮ ಆರೋಪಕ್ಕೆ ಸಾಕ್ಷಿಯಾಗಿ ತಮ್ಮ ಬಳಿ ಆಡಿಯೋ ರೆಕಾರ್ಡಿಂಗ್‌ ಇದೆ ಎಂದ ಅವರು ಆರೋಪ ಎದುರಿಸುತ್ತಿರುವ ಸಚಿವರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ. ಅಲ್ಲದೇ, ಆಡಿಯೋವನ್ನು ಕೂಡ

ಬಿಡುಗಡೆ ಮಾಡಲಿಲ್ಲ.

ಕೆಲ ಸಚಿವರು, ನಾವು ಮತಗಳಿಗಾಗಿ ಹಣ ಕೊಟ್ಟು ಬಂದಿದ್ದೇವೆ. ಹಾಗಾಗಿ ನಮಗೆ 2%, 3%, 4% ಕಮಿಷನ್‌ ಕೊಡಿ ಅಂತ ಕೇಳ್ತಿದ್ದಾರೆ. ಈ ವಿಚಾರ ಮತ್ತಷ್ಟು ಗಂಭೀರವಾಗುವ ಮುನ್ನ ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಸಚಿವರು ಹಾಗೂ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಅವರು ಒತ್ತಾಯಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಿಜಯ್ ಅವರು, ʻನಮ್ಮ ಜೀವಿತಾವಧಿಯಲ್ಲೇ ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗುವುದುʼ ಎಂದು ಹೇಳಿದ್ದನ್ನು ನೆನಪಿಸಿದ ಅಣ್ಣಾಮಲೈ, ಸಚಿವರು ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ನಿಯಮಿತವಾಗಿ ವಾರಾಂತ್ಯದ ಸಭೆಗಳನ್ನ ನಡೆಸುವಂತೆ ಸಲಹೆ ನೀಡಿದರು.

ಹೊಸ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ನಮ್ಮದಲ್ಲ. ಸರ್ಕಾರಕ್ಕೆ ಕಾರ್ಯನಿರ್ವಹಿಸಲು ಸಮಯ ನೀಡಬೇಕು. ಹಾಗಾಗಿ ನೀವು ಸಚಿವರು ಮತ್ತು ಅಧಿಕಾರಿಗಳ ಮೇಲೆ ನಿಯಂತ್ರಣ ಬಿಗಿಗೊಳಿಸಬೇಕು. ನಿಯಂತ್ರಣ ಸಡಿಲವಾದರೆ ಆಡಳಿತ ದಿಕ್ಕುತಪ್ಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

Leave a Comment