ಬಂಟ್ವಾಳ: ಲಕ್ಷ್ಮೀ ಶಕ್ತಿಯ ಸಂಕೇತ, ನಮ್ಮ ಕರ್ಮ, ಕರ್ತವ್ಯ, ಚಿಂತನೆಯಲ್ಲಿ ಲಕ್ಷ್ಮೀ ವಾಸವಾಗಿರುತ್ತಾಳೆ ಸಾಮೂಹಿಕವಾಗಿ ಮಾಡುವ ಪೂಜೆ ಶ್ರೇಷ್ಠವಾದ ವೃತಾಚರಣೆ, ಶಾಶ್ವತವಾದ ಸುಖ ನಮ್ಮ ಆತಂರ್ಯದಲ್ಲಿ ಇದೆ. ನಿಷ್ಕಲ್ಮಶವಾದ ಮನಸ್ಸು, ಭಕ್ತಿ ಇದ್ದಾಗ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ ನಡೆದ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರತೀಕ್ಷಾ ರೈ ಜಿ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಬಡವರ ಸೇವೆ ಮಾಡುವ, ಮಕ್ಕಳಿಗೆ ಧರ್ಮ, ಸಂಸ್ಕಾರವನ್ನು ಕಲಿಸಿಕೊಡುವ, ಹಿರಿಯರಿಗೆ ಗೌರವ ಕೊಡುವ ಸಂಕಲ್ಪವನ್ನು ಈ ದಿನ ಕೈಗೊಳ್ಳಬೇಕು ಎಂದು ತಿಳಿಸಿದರು.
ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತಾನಾಡಿ ಸಮಾಜದಲ್ಲಿರುವ ಮೇಲು ಕೀಳು, ಸ್ಪ್ರಶ್ಯ
ಅಸ್ಪ್ರಶ್ಯತೆ ತಾರಾತಾಮ್ಯ ತೊಲಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಲು ಇಂತಹ ಸಾಮೂಹಿಕ ಆಚರಣೆ ಅಗತ್ಯವಿದೆ ಅದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರೊರೆಸುವ ಕಾರ್ಯವೂ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂರು ಮಂದಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಶಿಕ್ಷಣಕ್ಕೆ ಧನ ಸಹಾಯ ಮಾಡಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ ಹಾಜರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಸುಮಿತ್ರಾ ಸುರೇಶ್ ಕುಂಪಣಮಜಲು, ನಳಿನಿ ವಿಠಲ ಆಳ್ವ, ಕೇಶವ ದೋಟ ಕುಸಮಾವತಿ ದಂಪತಿ ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. ಪೊಳಲಿ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ವರಮಹಾಲಕ್ಷ್ಮೀ ವೃತಾಚರಣೆ ಪೂಜೆ ನಡೆಯಿತು.















