ಬಂಟ್ವಾಳ :ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಗುರುಗಳ ತತ್ವ–ಆದರ್ಶ ಪಾಲನೆಯೇ ಶ್ರೇಷ್ಠ ಗುರುದಕ್ಷಿಣೆ: ಶಾಸಕ ರಾಜೇಶ್ ನಾಯ್ಕ್

Coastal Bulletin
ಬಂಟ್ವಾಳ :ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಗುರುಗಳ ತತ್ವ–ಆದರ್ಶ ಪಾಲನೆಯೇ ಶ್ರೇಷ್ಠ ಗುರುದಕ್ಷಿಣೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ಶ್ರೇಷ್ಠ ಗುರುದಕ್ಷಿಣೆಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಅವರು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶ ನೀಡದೆ ಅಹಿಂಸೆಯ ಮಾರ್ಗದ ಮೂಲಕ ಪರಿವರ್ತನೆ ತಂದ ಮಹಾನ್ ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಪ್ರಮುಖರಾಗಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಹೋದರೆ ಅದೇ ಗುರುಗಳಿಗೆ ಸಲ್ಲಿಸುವ ದೊಡ್ಡ ಗುರುದಕ್ಷಿಣೆಯಾಗುತ್ತದೆ ಎಂದು ಅವರು ಹೇಳಿದರು.

ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ ಹಾಗೂ ಸಮಾಜ ಸುಧಾರಣೆಯ ಸಂದೇಶಗಳನ್ನು ಪರಿಚಯಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು

ಭರವಸೆ ನೀಡಿದರು.

ಬೂಡ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ನಾರಾಯಣ ಗುರು ಜಯಂತಿಯಂತಹ ಕಾರ್ಯಕ್ರಮಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಗಳಾಗಬಾರದು. ಸರಕಾರದ ಕಾರ್ಯಕ್ರಮಗಳು ಕಾಟಾಚಾರಕ್ಕೆ ಸೀಮಿತವಾಗದೆ, ಗುರುಗಳ ತತ್ವ–ಸಂದೇಶಗಳನ್ನು ಸಮಾಜದ ಹೆಚ್ಚಿನ ಜನರಿಗೆ ತಲುಪಿಸುವ ರೀತಿಯಲ್ಲಿ ನಡೆಯಬೇಕು. ಇಲ್ಲದಿದ್ದರೆ ಅದು ಗುರುಗಳಿಗೆ ಮಾಡುವ ಅವಮಾನವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಅಧ್ಯಕ್ಷ ಕಿರಣ್ ಪೂಜಾರಿ ಪೂಂಜರಕೋಡಿ ಮತ್ತಿತರರು ಉಪಸ್ಥಿತರಿದ್ದರು.

ಉಪತಹಶೀಲ್ದಾರ್ ನವೀನ್ ಬೆಂಜನಪದವು ಸ್ವಾಗತಿಸಿದರು. ತಾಲೂಕು ಕಚೇರಿ ಸಿಬ್ಬಂದಿ ಜನಾರ್ದನ ವಂದಿಸಿದರು

Leave a Comment