ಬಂಟ್ವಾಳ :ಆ.30ರಂದು ನಾರಾಯಣಗುರು ವೃತ್ತ ಲೋಕಾರ್ಪಣೆ. ಗುರು ಪೂಜೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ‘ದೇಯಿ ಬೈದೆತಿ’ಚಲನಚಿತ್ರ ಪ್ರದರ್ಶನ.

Coastal Bulletin
ಬಂಟ್ವಾಳ :ಆ.30ರಂದು ನಾರಾಯಣಗುರು ವೃತ್ತ ಲೋಕಾರ್ಪಣೆ. ಗುರು ಪೂಜೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ‘ದೇಯಿ ಬೈದೆತಿ’ಚಲನಚಿತ್ರ ಪ್ರದರ್ಶನ.

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆ.30ರಂದು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬಿಸಿರೋಡಿನ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಲೋಕಾರ್ಪಣೆ, ಗುರು ಪೂಜೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ತುಳು ಚಲನಚಿತ್ರ ‘ದೇಯಿ ಬೈದೆತಿ’ ಪ್ರದರ್ಶನ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್‌ ಹೇಳಿದರು.

ಅವರು ಅ. 27ರಂದು ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ, ಸಮಾನತೆ ಹಾಗೂ ‘ಮಾನವ ಧರ್ಮವೇ ಶ್ರೇಷ್ಠ ಧರ್ಮ’ ಎಂಬ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಬಿಸಿರೋಡಿನ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಬೇಕೆಂಬುದು ಬಿಲ್ಲವ ಸಮಾಜದ ಬಹುಕಾಲದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ 2016ರಲ್ಲಿ ಪುರಸಭೆಯ ಸಭೆಯಲ್ಲಿ ಬಹುಮತದಿಂದ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ನಾಮಕರಣಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು.

ಬಿಲ್ಲವ ಸಮಾಜದ ವತಿಯಿಂದ ವೃತ್ತವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿತ್ತು. ಬಳಿಕ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ವೃತ್ತವನ್ನು ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಲ್ಲಿ ಮನವಿ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದಲೇ ವೃತ್ತವನ್ನು ಪುನರ್‌ನಿರ್ಮಿಸುವ ಭರವಸೆ ನೀಡಲಾಗಿತ್ತು. ಇದೀಗ ನೂತನ ವೃತ್ತ ನಿರ್ಮಾಣಗೊಂಡಿದ್ದು, ಆ.30ರಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಾಗಿದ್ದಾರೆ ಎಂದರು.

ಬೆಳಗ್ಗಿನಿಂದಲೇ

ಕಾರ್ಯಕ್ರಮ:

ಆ.30ರಂದು ಬೆಳಗ್ಗೆ 7ರಿಂದ 8.30ರವರೆಗೆ ಗುರುಮಂದಿರದಲ್ಲಿ ಭಜನಾ ಕಾರ್ಯಕ್ರಮ, 8.30ರಿಂದ 9ರವರೆಗೆ ಗುರುಪೂಜೆ, 9.30ಕ್ಕೆ ಮಹಾಪೂಜೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಲೋಕಾರ್ಪಣೆ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದೆ.

ಮಧ್ಯಾಹ್ನ ತುಳುನಾಡಿನ ಭವ್ಯ ಇತಿಹಾಸ ಹಾಗೂ ವೀರರಾದ ಕೋಟಿ-ಚೆನ್ನಯರ ಜೀವನ ಚರಿತ್ರೆಯನ್ನು ಆಧರಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ತುಳು ಚಲನಚಿತ್ರ ‘ದೇಯಿ ಬೈದೆತಿ’ಯ ಉಚಿತ ಪ್ರದರ್ಶನವೂ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೇಲ್ಕಾರ್, ಮಾಜಿ ಅಧ್ಯಕ್ಷ ಬೇಬಿ ಕುಂದರ್, ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್‌ ಸುವರ್ಣ ರಾಯಿ ಉಪಸ್ಥಿತರಿದ್ದರು

Leave a Comment