ಕಠ್ಮಂಡು: ನೇಪಾಳ(Nepal) ಮತ್ತು ಟಿಬೆಟ್(Tibet) ಗಡಿ ಭಾಗದಲ್ಲಿ ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿಗಳಲ್ಲಿ ಉಂಟಾದ ಜಲಪ್ರಳಯಕ್ಕೆ(Flash Flood)d ಕನಿಷ್ಠ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ.
ನದಿಗಳಲ್ಲಿ ನೀರಿನ ಮಟ್ಟ ದಿಢೀರನೆ 30 ಅಡಿಗಳಷ್ಟು ಏರಿಕೆಯಾಗಿದ್ದು, ಇಡೀ ಪ್ರದೇಶವೇ ಕೊಚ್ಚಿಹೋಗಿದೆ. ನಾಪತ್ತೆಯಾದವರಲ್ಲಿ ಭಾರತದ ಕೈಲಾಸ ಮಾನಸಸರೋವರ ಯಾತ್ರಿಕರು(Kailasa Manasa Sarovara Yatra) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರವಾಹದ ಅಬ್ಬರಕ್ಕೆ ನದಿ ಪಾತ್ರದ ಜನವಸತಿಗಳು, ಜಲವಿದ್ಯುತ್ ಘಟಕಗಳು ಹಾಗೂ ಯಾತ್ರಾ ಮಾರ್ಗಗಳು ಸಂಪೂರ್ಣವಾಗಿ ಜಲಸಮಾಧಿಯಾಗಿದೆ.
ನೇಪಾಳ ಪೊಲೀಸರ ಪ್ರಕಾರ ದೇಶದಲ್ಲಿ 157 ಮಂದಿ ಮೃತಪಟ್ಟಿದ್ದು, ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 3 ಸಾವುಗಳು ವರದಿಯಾಗಿವೆ. ನೇಪಾಳದಲ್ಲಿ 28 ದೇಶಗಳ 466 ವಿದೇಶಿಯರು ಹಾಗೂ 113 ನೇಪಾಳಿಗಳು ಸೇರಿದಂತೆ ಒಟ್ಟು 579 ಮಂದಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಲ್ಲಿ ಕನಿಷ್ಠ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ. ಇತರ ದೇಶಗಳ ಪೈಕಿ 54 ಅಮೆರಿಕನ್ನರು, 34 ಆಸ್ಟ್ರೇಲಿಯನ್ನರು, 33 ಬ್ರಿಟಿಷರು, 24 ಕೆನಡಿಯನ್ನರು, 19 ಮಲೇಷಿಯನ್ನರು ಮತ್ತು 8 ಕೊರಿಯನ್ನರು ಪತ್ತೆಯಾಗಿಲ್ಲ.
ಟಿಬೆಟ್ ಗಡಿ ಭಾಗದಲ್ಲಿ ಸುಮಾರು 265 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ತೀವ್ರತೆ ಎಷ್ಟಿತ್ತು ಎಂದರೆ ಸುಮಾರು 33 ಮೃತದೇಹಗಳು ಬರೋಬ್ಬರಿ 150 ಕಿ.ಮೀ ದೂರದ ಚಿತ್ವಾನ್‌ನಲ್ಲಿ ಪತ್ತೆಯಾಗಿವೆ.
ಪ್ರವಾಹ ಸಂಭವಿಸಿದ ವೇಳೆ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳುತ್ತಿದ್ದ ಭಾರತೀಯರು ಸೇರಿದಂತೆ ಸುಮಾರು 400 ಯಾತ್ರಿಕರು ಗಡಿ ದಾಟಲು ಸಜ್ಜಾಗಿದ್ದರು ಅಥವಾ ಆ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ರಸುವಾ ಜಿಲ್ಲೆಯಲ್ಲಿ ಪೊಲೀಸ್
ಮತ್ತು ಸೇನಾ ಬ್ಯಾರಕ್‌ಗಳು ಕೊಚ್ಚಿಹೋಗಿದ್ದು, 29 ಪೊಲೀಸರು ಹಾಗೂ 44 ಸೈನಿಕರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿಗೆ ತಿಳಿಸಿದ್ದಾರೆ. 20 ಮೆಗಾವ್ಯಾಟ್ ಸಾಮರ್ಥ್ಯದ ಲಾಂಗ್‌ಟಾಂಗ್ ಖೋಲಾ ಜಲವಿದ್ಯುತ್ ಯೋಜನೆಯ ಹಲವು ಕಾರ್ಮಿಕರು ಸಂಪರ್ಕಕ್ಕೆ ಸಿಗುತ್ತಿಲ್ಲ.
ನೇಪಾಳ ಸರ್ಕಾರದ ಪ್ರಾಥಮಿಕ ಅಂದಾಜಿನ ಪ್ರಕಾರ 9ಕ್ಕೂ ಹೆಚ್ಚು ಸೇತುವೆಗಳು ಮತ್ತು ಸುಮಾರು 40 ಕಿ.ಮೀ ರಸ್ತೆಗಳು ಕೊಚ್ಚಿಹೋಗಿವೆ. 13 ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. ಸುಮಾರು 200 ಟ್ರಕ್‌ಗಳು ಪ್ರವಾಹದ ಪಾಲಾಗಿವೆ. ಗಡಿ ಭದ್ರತಾ ಠಾಣೆಗಳು, ಕಸ್ಟಮ್ಸ್ ಕಚೇರಿಗಳು ಮತ್ತು ಬ್ಯಾಂಕುಗಳು ಜಲಾವೃತಗೊಂಡಿವೆ.
ಪ್ರತಿಕೂಲ ಹವಾಮಾನ ಮತ್ತು ರಸ್ತೆ ಸಂಪರ್ಕ ಕಡಿತದ ನಡುವೆಯೂ ನೇಪಾಳ ಸೇನೆ, ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆಗಳು ಹೆಲಿಕಾಪ್ಟರ್, ಡ್ರೋನ್, ಬೋಟ್‌ಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಪರಿಸ್ಥಿತಿಯನ್ನು ಎದುರಿಸಲು ಜನತೆ ಸಂಯಮ ಮತ್ತು ಒಗ್ಗಟ್ಟು ಪ್ರದರ್ಶಿಸಬೇಕೆಂದು ನೇಪಾಳ ಪ್ರಧಾನಿ ಬಾಲೆನ್ ಶಾ ಮನವಿ ಮಾಡಿದ್ದಾರೆ.
ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ ನೇಪಾಳ ಸರ್ಕಾರವು ಹೆಚ್ಚು ಹಾನಿಗೊಳಗಾದ ಪ್ರದೇಶಗಳನ್ನು ಮುಂದಿನ 3 ತಿಂಗಳ ಕಾಲ ‘ವಿಪತ್ತು ಪೀಡಿತ ವಲಯ’ಗಳೆಂದು ಘೋಷಿಸಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶಿಸಿದೆ. ಅತ್ತ ಟಿಬೆಟ್ ಗಡಿಯಲ್ಲಿ ರಸ್ತೆ, ವಿದ್ಯುತ್ ಮತ್ತು ಸಂಪರ್ಕ ಕಡಿತಗೊಂಡಿದ್ದು, ನಾಪತ್ತೆಯಾದವರ ಪತ್ತೆಗೆ ಸರ್ವಪ್ರಯತ್ನ ನಡೆಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೂಚಿಸಿದ್ದಾರೆ.















