ಬಂಟ್ವಾಳ: ಕರಾವಳಿಯ ಗಂಡುಕಲೆ ಯಕ್ಷಗಾನದ ವೈಭವವನ್ನು ಮತ್ತಷ್ಟು ಎತ್ತರಕ್ಕೇರಿಸುವ “ಪೊಳಲಿ ಯಕ್ಷೋತ್ಸವ–2026 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲೆಯಲ್ಲೇ ದಾಖಲೆಯ ನೂರಕ್ಕೂ ಮಿಕ್ಕಿ ಯಕ್ಷಗಾನ ಕಲಾವಿದರು ಒಂದೇ ವೇದಿಕೆಯಲ್ಲಿ ಕೂಡಿ ಅದ್ದೂರಿಯಾಗಿ ನಡೆಯಲಿರುವ ಈ ಅಪೂರ್ವ ಯಕ್ಷೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಆ.23ರಂದು ಶ್ರೀ ಕ್ಷೇತ್ರ ಪೊಳಲಿಯ ಸನ್ನಿಧಾನದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಜರಗಿತು.
ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಅನುವಂಶಿಕ ಮುಕ್ತೇಸರರಾದ ಮಾಧವ ಭಟ್ ಪೊಳಲಿ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಳಿಕ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ವೆಂಕಟೇಶ ನಾವಡ ಪೊಳಲಿ,ಸಂಸ್ಥಾಪಕ ಅ ನ ಭ ಪೊಳಲಿ, ಸುಬ್ರಾಯ ಕಾರಂತ ಪೊಳಲಿ,ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರ, ನವೀನ್ ಕಟ್ಟಪುಣಿ, ಸಂಘಟಕ ಬಿ ಜನಾಧನ ಅಮ್ಮುಂಜೆ, ಖ್ಯಾತ ಕಲಾವಿದ ಬಿ ಮೋಹನ್ ಅಮ್ಮುಂಜೆ , ಭಾಗವತರಾದ ಚಿನ್ಮಯ್ ಕಲ್ಲಡ್ಕ, ಶ್ರೇಯಾ ರೋಹಿತ್ ಉಚ್ಚಿಲ,ಮದ್ದಳೆಗಾರ ರೋಹಿತ್ ಉಚ್ಚಿಲ, ಸಮರ್ಥ್ ಉಡುಪ ಕತ್ತಲ್
ಸಾರ್, ಹಾಗೂ ರಾಮಕೃಷ್ಣ ತಪೋವನ ಯಕ್ಷಗಾನ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಯಕ್ಷ ಕಲಾ ಪೊಳಲಿ ಆಶ್ರಯದಲ್ಲಿ 31ನೇ ವರುಷದ ವರ್ಧಂತ್ಯುತ್ಸವದ ಅಂಗವಾಗಿ ನಡೆಯುವ ಈ ಕಾರ್ಯಕ್ರಮವು ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಅ.11ರಂದು ಆದಿತ್ಯವಾರ ಬೆಳಿಗ್ಗೆ 8:30 ರಿಂದ ರಾತ್ರಿ 10:30 ತನಕ ಅದ್ದೂರಿಯಾಗಿ ಜರುಗಲಿದೆ.
ಯಕ್ಷಗಾನ ಕಲೆಯ ವೈಭವ, ಕಲಾವಿದರ ಕಲಾ ಚಾತುರ್ಯ ಹಾಗೂ ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ನಡೆಯಲಿರುವ ಪೊಳಲಿ ಯಕ್ಷೋತ್ಸವ–2026 ಈ ಬಾರಿ ವಿಶೇಷ ಆಕರ್ಷಣೆಯಾಗಿ ಮೂಡಿಬರಲಿದೆ. ನೂರಕ್ಕೂ ಅಧಿಕ ಕಲಾವಿದರ ಸಮ್ಮಿಲನವೇ ಯಕ್ಷಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದು, ಯಕ್ಷಗಾನ ಲೋಕದಲ್ಲಿ ಮತ್ತೊಂದು ದಾಖಲೆ ಬರೆಯುವ ನಿರೀಕ್ಷೆ ಮೂಡಿಸಿದೆ.














