ನವದೆಹಲಿ: ಕರ್ನಾಟಕಕ್ಕೆ (Karnataka) ಮತ್ತೆ ‘ಕಾವೇರಿ’ (Cauvery Water) ಆಘಾತ ಎದುರಾಗಿದೆ. ತಮಿಳುನಾಡಿಗೆ (Tamil Nadu) ಮುಂದಿನ 15 ದಿನಗಳ ವರೆಗೆ 9,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಲಾಗಿದೆ.
ಇಂದು ನಡೆದ ಸಿಡಬ್ಲ್ಯೂಆರ್‌ಸಿ (CWRC) ಸಭೆಯಲ್ಲಿ ತಮಿಳುನಾಡಿಗೆ ಮತ್ತೆ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಲಾಗಿದೆ. 12 ಸಾವಿರ ಬದಲಿಗೆ ಈಗ 9 ಸಾವಿರ ಕ್ಯೂಸೆಕ್ ನೀರು ಬಿಡಲು ತಿಳಿಸಲಾಗಿದೆ.
ಮೊದಲ ಬಾರಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಲಾಗಿತ್ತು. ಎರಡನೇ ಬಾರಿಗೆ 12 ಸಾವಿರ, ಈಗ ಮೂರನೇ ಬಾರಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಲಾಗಿದೆ.
ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕಕ್ಕೆ ಸಾಲು ಸಾಲು ಸವಾಲುಗಳಿವೆ. ನಾಳೆ ಸಿಡಬ್ಲ್ಯೂಎಂಎ ಸಭೆ ಇದೆ. ಮುಂದಿನ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಕೂಡ ಇದೆ.
ಕರ್ನಾಟಕದ ವಾದ ಏನು?
ಕರ್ನಾಟಕದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಒಳಹರಿವು 30 ವರ್ಷದ ಸರಾಸರಿಗಿಂತ ಶೇ.49.18 ರಷ್ಟು ಕಡಿಮೆಯಾಗಿದೆ. ಜುಲೈ 29 ರಿಂದ ಆಗಸ್ಟ್ 23 ರವರೆಗೆ ಬಿಳಿಗುಂಡ್ಲುವಿನಲ್ಲಿ ಒಟ್ಟು 2,16,993 ಕ್ಯೂಸೆಕ್ ನೀರು ಹರಿದುಬಂದಿದ್ದು, ಆದೇಶಿತ 1,84,500 ಕ್ಯೂಸೆಕ್‌ಗಿಂತ 32,493 ಕ್ಯೂಸೆಕ್ ಹೆಚ್ಚಾಗಿದೆ. ಜಲಾಶಯಗಳ ಒಟ್ಟು ಒಳಹರಿವು 77,048 ಕ್ಯೂಸೆಕ್‌ನಿಂದ 9,282 ಕ್ಯೂಸೆಕ್‌ಗೆ ತೀವ್ರವಾಗಿ ಕುಸಿದಿದೆ. ಹೀಗಾಗಿ, ಬಿಳಿಗುಂಡ್ಲುವಿನಲ್ಲಿ ನಿರಂತರವಾಗಿ 12,000 ಕ್ಯೂಸೆಕ್ ನೀರು ಕಾಯ್ದುಕೊಳ್ಳುವುದು ಕಷ್ಟ. ಸಂಕಷ್ಟ ಪರಿಸ್ಥಿತಿಗೆ ಅನುಗುಣವಾಗಿ ಖಾರಿಫ್ ಬೆಳೆಗಳಿಗೆ ಕರ್ನಾಟಕದ ಅಗತ್ಯ 56.67 ಟಿಎಂಸಿ ಎಂದು ಅಂದಾಜಿಸಲಾಗಿದ್ದು, ಈವರೆಗೆ ಕೇವಲ 5.06 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
ಕುಡಿಯುವ ನೀರಿಗಾಗಿ ಸುಮಾರು 38 ಟಿಎಂಸಿ, ಪರಿಸರದ ಹರಿವಿಗಾಗಿ 10 ಟಿಎಂಸಿ ನೀರನ್ನು ಕಾಯ್ದಿರಿಸುವ ಅಗತ್ಯವಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದ ಸಂಗ್ರಹ, ಅಂತರ್ಜಲ ಲಭ್ಯತೆ ಮತ್ತು ಈಶಾನ್ಯ ಮುಂಗಾರು ನಿರೀಕ್ಷಿತ ಹರಿವುಗಳನ್ನು ಪರಿಗಣಿಸಬೇಕು. ಸಂಕಷ್ಟದ ಹೊರೆ ಕೇವಲ
ಕರ್ನಾಟಕದ ಜಲಾಶಯಗಳ ಮೇಲೆ ಬೀಳಬಾರದು. ಕಾವೇರಿ ಕೊಳ್ಳೆಯ ಎರಡೂ ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೊಳ್ಳಬೇಕು. ಬಿಳಿಗುಂಡ್ಲುವಿನಲ್ಲಿ ಪ್ರಸ್ತುತ ನಿಗದಿಪಡಿಸಿರುವ 12,000 ಕ್ಯೂಸೆಕ್ ಬದಲು ದಿನಕ್ಕೆ 6,000 ಕ್ಯೂಸೆಕ್‌ಗೆ ಇಳಿಸಿ, ಆಗಸ್ಟ್ 27 ರವರೆಗೆ ಮಾತ್ರ ನೀರು ಹರಿಸಲು ಮನವಿ. ನೀರು ಬಿಡಲು ಆದೇಶಿಸಬಾರದು ಎಂದು ಮನವಿ.
ತಮಿಳುನಾಡಿನ ಬೇಡಿಕೆ ಏನು?
ಬಾಕಿ ಉಳಿಸಿಕೊಂಡ 17.49 ಟಿಎಂಸಿ ನೀರು ಹರಿಸಬೇಕು. ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವು ಕಾಯ್ದುಕೊಳ್ಳಲು ಕೆಆರ್‌ಎಸ್ ಮತ್ತು ಕಬಿನಿಯಿಂದ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು. ಆಗಸ್ಟ್ 24 ರಿಂದ ಸೆಪ್ಟೆಂಬರ್ 7 ರವರೆಗಿನ 15 ದಿನಗಳಲ್ಲಿ ಒಟ್ಟು 28.386 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ತಲುಪಬೇಕು. ಇದರಲ್ಲಿ 17.49 ಟಿಎಂಸಿ ಬಾಕಿ ಪ್ರಮಾಣ ಹಾಗೂ 10.896 ಟಿಎಂಸಿ ಪ್ರೊ-ರಾಟಾ ಪಾಲು ಸೇರಿದೆ. ಸಂಕಷ್ಟ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ತನ್ನ ನ್ಯಾಯಸಮ್ಮತ ಪಾಲು ಸಿಗಬೇಕು. ಸಂಕಷ್ಟದ ಹೊರೆ ನಮ್ಮ ಮೇಲೆಯೇ ಬೀಳಬಾರದು.
CWRC ತೀರ್ಮಾನ ಏನು?
ಕರ್ನಾಟಕದ ಜಲಾಶಯಗಳ ಪ್ರಸ್ತುತ ನೀರಿನ ಸಂಗ್ರಹ, ಕೆಆರ್‌ಎಸ್ ಮತ್ತು ಕಬಿನಿ ಮೇಲ್ಭಾಗದ CWC ಕೇಂದ್ರಗಳ ಅಂಕಿ-ಅಂಶಗಳು ಹಾಗೂ 7 ದಿನಗಳ ಒಳಹರಿವು ಮುನ್ಸೂಚನೆಗಳನ್ನು ಸಮಿತಿಯು ಪರಿಗಣಿಸಿದೆ. ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ಬಿಳಿಗುಂಡ್ಲುವಿನಲ್ಲಿ ಸೆಕೆಂಡ್‌ಗೆ 9,000 ಕ್ಯೂಸೆಕ್ ಹರಿವು ಖಚಿತಪಡಿಸಬೇಕು ಎಂದು CWRC ಸೂಚಿಸಿದೆ.
ಈ ಹರಿವು ಆಗಸ್ಟ್ 25 ರ ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಇರಬೇಕು. 15 ದಿನಗಳ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು ಸುಮಾರು 11.66 ಟಿಎಂಸಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು CWRC ತೀರ್ಮಾನಿಸಿದೆ.














