ಬಂಟ್ವಾಳ: ಮುಂಜಾನೆ ಐದು ಗಂಟೆ. ಬಿಸಿರೋಡಿನ ರಸ್ತೆಗಳು ಇನ್ನೂ ಎಚ್ಚರಗೊಂಡಿರುವುದಿಲ್ಲ. ಆದರೆ ಬಂಟ್ವಾಳ ಪುರಸಭೆಯ ಪೌರ ಕಾರ್ಮಿಕ ಸೇಸಪ್ಪರ ದಿನ ಆಗಲೇ ಆರಂಭವಾಗಿರುತ್ತದೆ. ಕೈಯಲ್ಲಿ ಪೊರಕೆ ಹಿಡಿದು ನಗರದ ಸ್ವಚ್ಛತೆಗೆ ಇಳಿಯುವ ಅವರ ಬದುಕಿನ ಕಥೆಯೇ ರೋಚಕ, ಬದುಕಿನ ಏರಿಳಿತಗಳ ನಡುವೆ ಕಷ್ಟಗಳನ್ನು ಎದುರಿಸಿ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿರುವ ಇವರ ಸಾಧನೆಯೇ ಸಮಾಜಕ್ಕೆ ಪ್ರೇರಣಾದಯಕವಾಗಿದೆ.
ಕಸ ಗುಡಿಸುವ ಸ್ಥಳಕ್ಕೆ ತನ್ನದೇ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಬರುವ ಸೇಸಪ್ಪರು ಪೌರ ಕಾರ್ಮಿಕರಾಗಿ 1996ರಲ್ಲಿ ₹50 ದಿನಗೂಲಿಯಿಂದ ಆರಂಭವಾದ ಉದ್ಯೋಗ. ಕೇವಲ ಮೂರನೇ ತರಗತಿ ವಿದ್ಯಾಭ್ಯಾಸ. ಬದುಕಿನ ಒಂದು ಹಂತದಲ್ಲಿ ಕುಡಿತದ ಚಟಕ್ಕೆ ಒಳಗಾದರೂ, 2005ರ ಬಳಿಕ ಅದನ್ನು ಸಂಪೂರ್ಣವಾಗಿ ತ್ಯಜಿಸಿ ಹೊಸ ಬದುಕಿಗೆ ಕಾಲಿಟ್ಟರು. ಅಂದಿನ ಎಸ್‌ಐ ಬೆಳ್ಳಿಯಪ್ಪರ ಮಾತುಗಳು ಅವರ ಬದುಕಿನ ಬದಲಾವಣೆಗೆ ಪ್ರಮುಖ ಕಾರಣವಾಯಿತು.
ಇಂದಿಗೂ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಸೇಸಪ್ಪ, ವಹಿಸಿದ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಪೌರ ಕಾರ್ಮಿಕರಾಗಿ ಕೆಲಸ ಮಾಡುವುದರ ಜೊತೆಗೆ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಪೊರಕೆಯಿಂದ ಪೋರ್ಚುನರ್ ಕಾರಿನವರೆಗೆ ಎಂಬುದು ಅವರ ಬದುಕಿನ ವಿಶೇಷ ಪಯಣ. ಸ್ವಚ್ಛತಾ ಕೆಲಸದ ಜತೆಗೆ ಕೃಷಿ, ಹೈನುಗಾರಿಕೆ ಹಾಗೂ ಕೂಲಿ ಕೆಲಸದಲ್ಲೂ ತೊಡಗಿಸಿಕೊಂಡಿರುವ ಅವರು, “ಯಾವ ಕೆಲಸವೂ ಕೀಳಲ್ಲ, ದುಡಿಯಲು ಹಿಂಜರಿಯಬಾರದು” ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ತೋರಿಸಿದ್ದಾರೆ.
ಪರವ ಸಮುದಾಯಕ್ಕೆ ಸೇರಿದ ಸೇಸಪ್ಪರ ಕುಟುಂಬಕ್ಕೆ ದೈವದ ಮೇಲಿನ
ನಂಬಿಕೆಯೂ ಗಾಢವಾಗಿದೆ. ತಂದೆ ದೈವದ ನರ್ತಕರಾಗಿದ್ದು, ಇದೀಗ ಅವರ ಮಗನೂ ಆ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ತಂದೆಯ ನಿಧನದ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ, ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ಬದಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಅವರ ಬದುಕಿನ ಅತ್ಯಂತ ನೋವಿನ ಅಧ್ಯಾಯ. “ಯಾರಿದ್ದಾರೆ, ಯಾರಿಲ್ಲ ಎಂಬುದಕ್ಕಿಂತ ನಮ್ಮೊಳಗಿನ ಧೈರ್ಯವೇ ಮುಖ್ಯ” ಎನ್ನುವುದು ಆ ಅನುಭವದಿಂದ ಅವರು ಕಲಿತ ಪಾಠ.
ಇಂದು ಸ್ವಂತ ಪೋರ್ಚುನರ್ ಕಾರಿನಲ್ಲಿ ಕೆಲಸಕ್ಕೆ ಬರುವ ಸೇಸಪ್ಪ, ತಮ್ಮ ಹಿಂದಿನ ದಿನಗಳನ್ನು ಮರೆತಿಲ್ಲ. ಪೊರಕೆ ಹಿಡಿದ ಕೈಗಳು ನಗರದ ಕಸವನ್ನು ಸ್ವಚ್ಛಗೊಳಿಸಿದಂತೆ, ತಮ್ಮ ಬದುಕಿನ ಕಷ್ಟಗಳನ್ನೂ ಒಂದೊಂದಾಗಿ ದೂರ ಮಾಡಿಕೊಂಡಿವೆ.
ವಿದ್ಯೆ ಕಡಿಮೆಯಾದರೂ ಬದುಕಿನ ಪಾಠ ದೊಡ್ಡದಾಗಿರಬಹುದು. ಪರಿಸ್ಥಿತಿ ಕಠಿಣವಾಗಿದ್ದರೂ ಪರಿಶ್ರಮಕ್ಕೆ ಸೋಲಿಲ್ಲ ಎಂಬುದಕ್ಕೆ ಸೇಸಪ್ಪರ ಬದುಕೇ ಸಾಕ್ಷಿ. ಪೊರಕೆಯಿಂದ ಪೋರ್ಚುನರ್‌ವರೆಗೆ ಸಾಗಿದ ಇವರ ಜೀವನ ಸಾಧನೆ ಸಮಾಜಕ್ಕೆ ಮಾದರಿ.
ಕೆಲಸವನ್ನು ಕೀಳಾಗಿ ಕಾಣಬೇಡಿ :
ಯಾವುದೇ ಕೆಲಸವನ್ನು ಕೀಳು ಮನೋಭಾವನೆ ಇಟ್ಟುಕೊಳ್ಳದೆ ಪರಿಶ್ರಮದಿಂದ ಪ್ರಾಮಾಣಿಕವಾಗಿ ಮಾಡಿದರೆ ಪ್ರತಿಫಲ ತನ್ನಿಂದ ತಾನಾಗಿ ದೊರೆಯುತ್ತದೆ, ಎಲ್ಲಾ ವರ್ಗದ ಕೆಲಸದವರಿಗೂ ಸಮಾಜದ ಸಹಕಾರ ಅಗತ್ಯ.
ಸೇಸಪಣ್ಣ ಪೌರ ಕಾರ್ಮಿಕ















